Thursday, March 18, 2021

ಮಿಂಚುಳ್ಳಿ ಮಾತು

ಹಳ್ಳಿ ಮನೆ ಪಕ್ಕ ಬಹಳಷ್ಟು ಕಿಂಡಿ ಅಣೆಕಟ್ಟುಗಳಿವೆ. ಮುಂಗಾರು ನೀರನ್ನು ತಡೆಹಿಡಿಯಲು, ಅಂತರ್ಜಲ ವೃದ್ಧಿಸಲು ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲ ಮುಗಿದ ತಕ್ಷಣ ಬರಡಾಗುತ್ತಿದ್ದ ಜೀವಜಲಗಳು ಈಗ ಬೇಸಿಗೆಯಲ್ಲೂ ಮಿಂಚುತ್ತಿವೆ.

ಜಲವೆಂದರೆ ಜೀವ! ಇದರಲ್ಲಿ ಒಂದು ಸೇತುವೆಯ ಬಳಿ ಬಹಳಷ್ಟು ಹಕ್ಕಿಗಳು ತಮ್ಮ ನೆಲೆ ಕಂಡುಕೊಂಡಿವೆ. ಬಹುಶಃ ಇಲ್ಲಿ ಸೂರ್ಯನ ಬೆಳಕು ಸಮೃದ್ಧವಾಗಿದೆ ಹಾಗೆ ಜಲಚರಗಳು ಬಹಳಷ್ಟಿರಬೇಕು. ಹಲವು ಪ್ರಭೇದದ ಬೆಳ್ಳಕ್ಕಿಗಳು, ಮಿಂಚುಳ್ಳಿಗಳನ್ನು ಇಲ್ಲಿ ಕಾಣಬಹುದು. ಸುಮಾರು ನಾಲ್ಕು ಬಗೆಯ ಮಿಂಚುಳ್ಳಿ ಪ್ರಬೇಧಗಳನ್ನು ನಾನು ಇಲ್ಲಿ ಕಂಡಿದ್ದೇನೆ. ಪ್ರತಿ ಸಂಜೆ ಸೈಕಲ್ ತುಳಿಯುವಾಗ ಸೇತುವೆ ಬಳಿಯ ಮರದಲ್ಲಿ ಹೊಂಚು ಹಾಕುತ್ತಿರುವ ಮಿಂಚುಳ್ಳಿಗಳನ್ನು ಕಾಣುವ ದೃಶ್ಯ ಮಾಮೂಲಾಗಿದೆ. ನಾನು ಬಂದಾಕ್ಷಣ ಅವು ಹಾರಿಹೋಗುವುದು ಕೂಡಾ ಸಾಮಾನ್ಯ. ಬಹುಶಃ ಇವುಗಳಿಗೆ ಇದು ಹೊಸದು. ರಸ್ತೆಯಲ್ಲಿ ಒಂದೋ ಜನರು ಓಡಾಡುತ್ತಾರೆ ಅಥವಾ ವಾಹನದಲ್ಲಿ ರೊಯ್ಯನೆ ಸಾಗುತ್ತಾರೆ ವಿನಾ ಯಾರು ನಿಂತು ನನ್ನ ಹಾಗೆ ಪಕ್ಷಿ ವೀಕ್ಷಣೆಯಲ್ಲಿ ತೊಡಗುವುದಿಲ್ಲ. ನನಗು ಈ ಜಾಗ ಬಹಳ ಇಷ್ಟ. ಹಕ್ಕಿ ಹಾರಿ ಹೋಗುವುದು ಸಹಜ, ಸ್ವಲ್ಪ ತಾಳ್ಮೆ ಇದ್ದಾರೆ ಕ್ಯಾಮರಾ ಕಣ್ಣಿಗೆ ಒಂದು ದಿನ ಖಂಡಿತಾ ಸಿಗುತ್ತದೆ!

ಇರಲಿ. ಒಂದು ದಿನ ಎರಡು ಮಿಂಚುಳ್ಳಿಗಳನ್ನು ಒಟ್ಟಿಗೆ ಕಂಡೆನು. ಸ್ವಲ್ಪ ಹೊತ್ತು ಕಾಡು ನೋಡುವ ತಂತ್ರ ಅನುಸರಿಸಿ ಮತ್ತೆ ನಾನು ಅಲ್ಲೇ ಇದ್ದಿದ್ದನ್ನು ಕಂಡು ನನ್ನ ಗುರಾಯಿಸಿ ಹಾರಿಹೋದವು. ಅವುಗಳ ಕಾಲ್ಪನಿಕ ಬರಹ ಇಲ್ಲಿದೆ ಸುಮ್ನೆ ತಮಾಷೆಗಾಗಿ :-)

೧ : ಲೇ ತಿಮ್ಮ! ಯಾರೋ ಅವ್ನು ದಿವ್ಸ ಬರ್ತಾನೆ. ಅದೇನದು ಕಪ್ಪು ಬಣ್ಣದ್ದು ಅವ್ನ ಕೈಯಲ್ಲಿ?

೨ : ಹೂ ಕಣಣ್ಣಾ ಅಲ್ಲೇ ನಿಂತುಕೊಂಡು ಗುರಾಯ್ಸ್ತ ಇರ್ತಾನೆ! ಬಂದೂಕು ಅಲ್ಲ ತಾನೇ? ನಾವು ಇಲ್ಲಿ ಫಿಶ್ ತಿನ್ನೋಣ ಅಂದ್ರೆ ನಮ್ಮನ್ನೇ ತಿನ್ನಕ್ಕೆ ಬರೋತರ ಇದಾನೆ!


೧ : ಯಾವುದಕ್ಕೂ ನೀನು ಅವನ ಮೇಲೆ ಕಣ್ಣಿಡು. ನಾನು ಬೇಟೆ ಮೇಲೆ ಕಣ್ಣಿಟ್ಟಿರ್ತೀನಿ.

೨ : ಹೂ ಕಣಣ್ಣಾ ಹಾಗೆ ಮಾಡ್ತೀನಿ. 


೧ : ಅವನಿಂದಾಗಿ ಬೇಟೆ ಆಡೋದು ಕಷ್ಟ ನೋಡು.

೨ : ಹೂ ಕಣಣ್ಣಾಇವ್ನು ನಮ್ನೆನು ಬೇಟೆ ಆಡಲ್ಲಾ ತಾನೇ?

೧ : ಇಲ್ಲ ಅಂದುಕೋತೀನಿ. ಆದರು ಜಾಗ್ರತೆ ಬೇಕು ಯಾವುದಕ್ಕೂ!


೨ : ಅಣ್ಣಾ ಅವನೇನೋ ಮುಂದೆ ತರ್ತಾವ್ನೆ. ಅಣ್ಣಾ ಏನೋ ಕಟ ಕಟ ಶಬ್ದ ಆಗ್ತಾ ಇದೆ. ನಡಿ ಹಾರಿ ಹೋಗೋಣ ಬೇಗಾ ಅಣ್ಣಾ ಬೇಗಾ..


{ಅಷ್ಟಕ್ಕೇ ಎರಡು ಹಾರಿ ಹೋದವು. ಒಂದು ಪಕ್ಕದ್ದ ಮರಕ್ಕೆ ಹಾರಿ ಹೋಗಿತ್ತು}

೧ : ಲೇ ತಿಮ್ಮ! ಎಲ್ಲಿ ಹೋದಿಯೋ, ಕತ್ಲು ಬೇರೆ ಆಗ್ತಾ ಇದೆ. ಇನ್ನು ಬೇಟೆ ಕೂಡಾ ಸಿಕ್ಕಿಲ್ಲ! ತುಂಬಾ ಹಸಿವು ಆಗತಿದೆ ಮಗನೆ! ಈ ಜನಕ್ಕೆ ಮಾಡೋ ಕೆಲ್ಸಾ ಇಲ್ಲ. ಊಟದ ಟೈಮ್ ಅಲ್ಲೇ ಅದೇನೋ ಕಪ್ಪು ಆಯುಧ ಇಟ್ಟಕೊಂಡು ಬರ್ತಾನೆ! ಲೇ ತಿಮ್ಮ ಎಲ್ಲಿದಿಯೋ

೧ : ಲೇ ತಿಮ್ಮ ಅದು ನಮ್ಮ ಹಿಡಿಯಕ್ಕೆ ಇರೋ ಬಂದೂಕು ಅಲ್ವೋ ಮಾರಾಯಾ. ಅದು ನಮ್ಮ ಇನ್ನೊಂದು ಮುಸುಡಿನ ಮಾಡಿ ಗೋಡೆ ಮೇಲೆ ನೇತಾಡಕ್ಕೇ ಇಡೋ ಮೆಷಿನ್. 

{ಸ್ವಲ್ಪ ಸಮಯದ ಬಳಿಕ ಹಕ್ಕಿ ಅಲ್ಲೇ ಇನ್ನೊಂದು ಮರದ ಬಳಿ ಹಾರಿಕೊಂಡು ಬಂತು}

೧ : ಮಗನೆ ಇನ್ನು ಇಲ್ಲೇ ಇದಿಯಾ! ಉಣ್ಣಕ್ಕೆ ಬಿಡೋ ಮಾರಾಯಾ. ನೀನು ನಿಂತಿರೋ ಜಾಗದಿಂದ ಬೇಟೆ ಆಡೋದು ಸುಲಭ. ಆಕಡೆ ಹೋದ್ರೆ ದೊಡ್ಡ ಹಕ್ಕಿಗಳ ಕಾಟ. ಇಲ್ಲಿ ಈ ಹುಚ್ಚು ಫೋಟೋ ಹೊಡೆಯುವನ ಕಾಟ. ಸರಿ ಹೋಯ್ತು. ಇವತ್ತು ಉಪವಾಸನೆ ಗತಿ :-(

{ಅಷ್ಟಕ್ಕೇ ಸಂಜೆಯಾಗಿತ್ತು. ಮನೆ ಕಡೆ ತೆರಳಲು ಸಿದ್ಧನಾದೆ. ಇನ್ನೇನು ಹೋಗಬೇಕು ಅನ್ನೋಷ್ಟರಲ್ಲಿ ಪಕ್ಕದಲ್ಲಿ ಇನ್ನೊಂದು ಪ್ರಭೇದದ ಮಿಂಚುಳ್ಳಿ [ಕಾಮನ್ ಕಿಂಗಫಿಶರ್ ] ಕಿ-ಕಿ ಅಂತಾ ಮೀನಿಗೆ ಹೊಂಚು ಹಾಕುತ್ತಿತ್ತು. ನನ್ನ ಕರೀಲಿಕ್ಕೆ ಕಿ-ಕಿ ಶಬ್ದ ಮಾಡ್ತು ಅಂತ ಅನ್ನಿಸ್ತಿತ್ತು ಅಥವಾ ಹಾರಿ ಹೋದ ಮಿಂಚುಳ್ಳಿಗಳ ಅಣಕಾವಾಡಲು ಕರಿತು ಅನ್ಸುತ್ತೆ :-). ಫೋಟೋ ತೆಗೆದ ತಕ್ಷಣ ನೀರಿಗೆ ನೆಗೆದು ಮೀನು ಹಿಡಿದು ಹಾರಿಹೋಯಿತು}


ಹಾ ಮಕ್ಳ! ನೀವು ಹೆದ್ರೋದು ಜಾಸ್ತಿ. ನನಿಗೆ ಗೊತ್ತು ಈ ಪಾರ್ಟಿ ಏನು ಮಾಡಲ್ಲ ಅಂತಾ. ಅವನು ದಿನಾ ಬಂದ್ರು ವಿಶ್ವಾಸ ಬರ್ಲಿಲ್ವೇನು ದಡ್ಡ ಶಿಖಾಮಣಿಗಳು. ಅದಿಕ್ಕೆ ಹತ್ರದಿಂದ ಫೋಟೋ ಹೊಡಿಸ್ಕೊಂಡೆ ನೋಡ್ರಲ್ಲೇ! ಹಾಗೆ ಇನ್ನೇನು ಮೀನು ಕೂಡಾ ಸಿಗುತ್ತೆ ಈಗಾ!


ಇನ್ನೊಂದಿಷ್ಟು ಫೋಟೋ ಹೊಡಿ ಅಣ್ಣಾ! ನನ್ನ ಫುಲ್ ಫೇಮಸ್ ಮಾಡೋದನ್ನ ಮರೀಬೇಡ!



ಮತ್ತಷ್ಟು ಹಕ್ಕಿ ಸರಣಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ :  NKBirdSeries

1 comment:

Printfriendly

Related Posts Plugin for WordPress, Blogger...