Friday, May 6, 2016

ಅಪಾರ್ಟಮೆಂಟಿನ ಶ್ವಾನ ಪುರಾಣ!

ಬೌ ವೌ ವೌ ವೌ ವೂ…………………………………………ವೌ ವೌ…
ವೆಕ್ ವೆಕ್ ವೆ ವೆ ವೆ ವೆ…………………………………… ವೆಕ್ ವೆಕ್.. ವೆವೋಊಊಊಊ…………… ವೆಕ್ ವೆಕ್


ಶೂರ್ಪನಖಿ ಸುಪ್ರಜಾ ರಾಹು ಪೂರ್ವಾ ಸಂಧ್ಯಾ  ಪ್ರವರ್ತತೆ|
ಉತ್ತಿಷ್ಠ ಶ್ವಾನಾಸುರ ಕರ್ತವ್ಯಂ ಬೌ ಬೌ ಅಹ್ನಿಕಮ್||


ಎಂದು ಬೆಳಗ್ಗೆ ೫:೪೫ಕ್ಕೆ  ವೈಕುಂಠದ ಬಾಗಿಲು ತೆರೆದ ತಕ್ಷಣ ಶೂರ್ಪನಖಿಯು, ದ್ವಾರಪಾಲಕನಾದ ಕಾವಲುಗಾರನಿಗೆ ವಂದಿಸಿ, ಮಗ ರಾಹುವನ್ನು ಕರೆದುಕೊಂಡು ಕಂಬಗಳಿಗೆ ಸೇವೆ ಸಲ್ಲಿಸಿ, ಭೂಮಿಗೆ ಲಾಡು ನೈವೇದ್ಯ ಅರ್ಪಿಸಿ ತದನಂತರ ಮಹಾಪೂಜೆಯ ನಿಮಿತ್ತವಾಗಿ ಮೊಳಗಿತು ಶ್ವಾನಗಳ ಕಂಠದ ಘಂಟನಾದ. ಅರೆರೆ! ಶೂರ್ಪನಖಿ ಮಗ ರಾಹು ಇದು ಯಾವ ಪುರಾಣ ಎಂದು ಆಶ್ಚರ್ಯಪಡಬೇಡಿ. ಓದುತ್ತಾ ಹೋದಂತೆ ಎಲ್ಲ ವಿಷಯವೂ ಬಹಿರಂಗವಾಗುತ್ತದೆ ;)


ಸುಮಾರು ೬ ತಿಂಗಳು ಕಳೆದಿರಬೇಕು, ನಾವು ಇರುವ ಸಾಯಿ ಸನ್ನಿಧಿ ಅಪಾರ್ಟಮೆಂಟಿನಲ್ಲಿ (ಬಹುಶಃ ನಾಯಿ ಸನ್ನಿಧಿ ಅಂದರೂ ತಪ್ಪಾಗದು) ಶ್ವಾನಗಳದ್ದೇ ಗಲಾಟೆ. ಇದರ ಮುಖ್ಯ ಪಾತ್ರಧಾರಿ ಹೆಣ್ಣು ನಾಯಿ (ಶೂರ್ಪನಖಿ) ಮತ್ತು ಅದರ ನಾಲ್ಕು ಮಕ್ಕಳು. ಮೊದ್ದಲು ವಕ್ಕರಿಸಿಕೊಂಡಿದ್ದು ಶೂರ್ಪನಖಿ ಮಾತ್ರ. ಆದರೆ ಅದು ಬಸುರಿಯೆಂದು ತಿಳಿದದ್ದು ಒಂದು ತಿಂಗಳ ಬಳಿಕವೆ! ಈ ಮಾತನ್ನು ಪಾಪಿ ಬಿಲ್ಡರ್ ಕೂಡ ಬಿಚ್ಚಿರಲಿಲ್ಲ. ವಾಸ್ತವದಲ್ಲಿ ಇದು ಹೆಣ್ಣು ನಾಯಿ ಎಂದು ಗಮನಕೊಟ್ಟಿದ್ದು ಆವಾಗಲೇ. ಅದೊಂದು ದಿನ ಬೆಳ್ಳಂಬೆಳಗ್ಗೆ ಕುಯ್ ಕುಯ್ ಶಬ್ಧ, ನೋಡಿದರೆ ೫ ಹೊಸ ಪೀಡೆಗಳು ಜನಿಸಿದ್ದವು. ಅದರಲ್ಲಿ ಒಂದು, ವಾರದ ಬಳಿಕ ಆರೋಗ್ಯ ನಿಮಿತ್ತವಾಗಿ ತೀರಿಕೊಂಡಿತು. ಈಗ ಉಳಿದದ್ದು ನಾಲ್ಕು ಮಾತ್ರ. ದಿನ ಕಳೆದಂತೆ ಅವುಗಳ ರಂಪಾಟ, ಹೇಸಿಗೆ, ಬೊಗಳುವಿಕೆ ತಡೆಯಲಾರದಷ್ಟು  ಮುಗಿಲು ಮುಟ್ಟಿತು. ರಾತ್ರಿಯಾದಂತೆ ಅವುಗಳು ಭೂತ ಅಂಟಿಕೊಂಡಂತೆ ಬೊಗಳುತ್ತಿದ್ದವು. ಇದರಿಂದ ರೋಸಿ ಹೋದ ಅಪಾರ್ಟಮೆಂಟಿನ ನಿವಾಸಿಗಳು ಬಿಲ್ಡರ್ ಜೊತೆ ಜಗಳವಾಡಿ ಹೇಗೋ ೩ ನಾಯಿಗಳನ್ನು ಪಾರ್ಸೆಲ್ ಮಾಡಿದ್ದು ಆಯಿತು. ಈಗ ಬಾಕಿ ಉಳಿದಿರುವುದು ಶೂರ್ಪನಖಿ ಮತ್ತು ಅದರ ಕ್ರೂರಿ ಮಗ ರಾಹು. ರಾಹು ಒಬ್ಬ ಮಹಾ ರೌಡಿ ಎಂದರೂ ತಪ್ಪಾಗದು. ಅದಕ್ಕೆ ಬಹುಜನರು ಅದನ್ನು ಕೊಂಡುಹೋಗಲು ನಿರಾಕರಿಸಿದ್ದು ಉಂಟು.

ಹೆಣ್ಣು ನಾಯಿ ನೋಡಲು ಚಂದವಿದ್ದರೂ ಒಳಗೆ ರಾಕ್ಷಸಿ ಬುದ್ಧಿ. ಅದಕ್ಕೆ ಶೂರ್ಪನಖಿ ಎಂಬ ಹೆಸರು ಸರಿ ಎನ್ನಿಸಿತು. ಛಾಯಾಗ್ರಹದಲ್ಲಿ ಒಂದಾದ ರಾಹುವಿಗೆ ಉದ್ಧಟತನ ಹೆಚ್ಚು. ತಾನೆ ಎಲ್ಲದರಲ್ಲೂ ಮುಂದಿರಬೇಕೆಂಬ ಹಂಬಲ. ಪರರನ್ನು ತುಳಿದಾದರೂ ತಾನು ಮುಂದೆ ಬರಬೇಕೆನ್ನುವ ತವಕ. ಅದೇ ಗುಣ ನಮ್ಮ ಉಳಿದಿರುವ ಗಂಡು ನಾಯಿ ಬಳಿ ಇರುವುದರಿಂದ ಅದಕ್ಕೆ ರಾಹುವಿನ ನಾಮಕರಣ ಮಾಡಲಾಯಿತು. ರಾಹುವಿಗೆ ಉದ್ಧಟತನ ಹೆಚ್ಚು. ಸಾಮರ್ಥ್ಯವಿಲ್ಲದಿದ್ದರೂ ಪಕ್ಕದ ಬೀದಿಯ ನಾಯಿಗಳೊಂದಿಗೆ ಸಮರ ಸಾರುತ್ತಾನೆ. ಹೀಗೆ ಮಾಡಲು ಹೋಗಿ ಸುಮಾರು ೨-೩ ಬಾರಿ ಕಚ್ಚಿಸಿಕೊಂಡು ಬಂದಿದ್ದರೂ ಬುದ್ಧಿ ಬಂದಿಲ್ಲ (ಪ್ರಾಣಿಗಳಿಗೆ ಬುದ್ಧಿಯಿಲ್ಲ ಎನ್ನುವುದು ತಪ್ಪೆ  ಅನ್ನಿ). ಇಷ್ಟಾದರೂ ಅವನ ಅಹಂಕಾರ ಇಳಿದಿರಲಿಲ್ಲ. ಈಗಲೂ ಕಾಳಗಕ್ಕಿಳಿಯುತ್ತಾನೆ (ರಿಯಲ್ ಎಸ್ಟೇಟ್ ನಾಯಿ ಅನ್ನುವುದರಲ್ಲಿ ಸಂಶಯವೇ ಇಲ್ಲ!). ಬೆಳಗ್ಗೆ ೬ರಿಂದ - ಮಧ್ಯರಾತ್ರಿ ೧೨ರವರೆಗೂ ಇವುಗಳ ಕಿರುಚಾಟ ಮಹಾಯುದ್ಧದಂತೆ ಕೇಳುತ್ತಿತ್ತು. ಬಾಯಿ ಇದೆಯೆಂದು ಬೊಗಳುವುದೇ ವಿನಹಾ ಯಾವುದೇ ಅಪಾಯ ಸೂಚನೆಗಾಗಿ ಅಲ್ಲ (ತಾನು ಇಲ್ಲಿದ್ದೇನೆ ಎಂದು ಸೂಚಿಸುವ heartbeat ಮೆಸೇಜ್ ಎನ್ನಬಹುದು ಅಥವಾ ಬೌಬೌbeat).ನಾಯಿಗಳಿಗೂ ತೋರಿಕೆಯ ಬುದ್ಧಿ (show-off) ಯಾವಾಗ ಅಂಟಿಕೊಂಡಿತೋ ತಿಳಿಯೆನು. ಸುತ್ತಲಿನ ವಾತಾವರಣ ಶಾಂತವಾಗಿದ್ದರೂ ಇವುಗಳ ರೋದನೆ ಮಾತ್ರ ಮುಗಿಲು ಮುಟ್ಟುತ್ತಿತ್ತು. ಬಹುಶಃ ಇದು ವಿದೇಶಿ ನಾಯಿ ಅದರಲ್ಲೂ ಅಮೇರಿಕದ ನಾಯಿ ಎನ್ನುವುದರಲ್ಲಿ ಸಂಶಯವೇ ಇರಲಿಲ್ಲ. ಸಮಸ್ತ ಜಗತ್ತು ಶಾಂತಿಯಿಂದಿದ್ದರೆ ಅಮೇರಿಕಕ್ಕೆ ಸಹಿಸಲು ಆಗುತ್ತಿರಲಿಲ್ಲ. ಅದಕ್ಕೆ ಗಲಭೆ ಸೃಷ್ಟಿಸಿ ಶಸ್ತ್ರಾಸ್ತ್ರ ಮಾರಾಟ ಮಾಡುವುದೇ ಅದರ ಧ್ಯೇಯವಾಕ್ಯವೆನ್ನುವುದು ಜಗತ್ತಿಗೆ ಗೊತ್ತಿರುವ ಸತ್ಯ. ಶಸ್ತ್ರಾಸ್ತ್ರಗಳಿಂದಲೆ ಅಮೇರಿಕದ ಬೇಳೆ ಬೇಯುವುದು ಕೂಡ

ಇರಲಿ, ವಿಷಯಕ್ಕೆ ಬರೋಣ. ನಾಯಿ ತಂದವರಾರು? ಮೊದಲೇ ಹೇಳಿದಂತೆ ನಮ್ಮ ಬಿಲ್ಡರ್ ಮಹಾರಾಜರು!! ಅವನ ಮನೆಯಲ್ಲಿ ನೋಡಿಕೊಳ್ಳುವವ್ರು ಯಾರಿಲ್ಲವಂತೆ :P ಅದಿಕ್ಕೆ ಅಪಾರ್ಟಮೆಂಟಿನ ರಕ್ಷಣೆಗೆ ಇಟ್ಟಿರುವುದಾಗಿ ಅವನ ಹೇಳಿಕೆ. ಬಹುಶಃ ಅಲ್ಲೂ ಕೂಡ ಇದರ ಕಾಟ ತಡೆಯಲಾರದೆ ಇನ್ನು ಮುಂದೆ ಅಪಾರ್ಟಮೆಂಟ್ ಜನರ ನಿದ್ದೆಕೆಡಿಸುವ ಅವನ ಯೋಜನೆ ಇರಬೇಕು (ಆಂಗ್ಲದಲ್ಲಿ offloading ಹೇಳುತ್ತಾರೆ). ಕೋಟಿಗಟ್ಟಲೆ ದುಡಿಯುವ ಇಂತಹ ಧೂರ್ತರಿಗೆ ಸಣ್ಣ ನಾಯಿ ಸಾಕುವುದು ಯಾವ ದೊಡ್ಡ ವಿಷಯ :D. ಬಂಗಾರದಂತಹ ಬೆಲೆ ಸಿಕ್ಕರೂ ತನ್ನ ಮರಿಗಳನ್ನು ಮಾರಲೊಲ್ಲೆನೆಂದ ಬಿಲ್ಡರ್ ಮಹಾರಾಯ. ಬಹುಶಃ ಅವನ ಧೂರ್ತ ಪ್ರಾಣಿ ಪ್ರೀತಿಗೆ ಯಾರಾದರೂ ಮೆಚ್ಚುಗೆ ವ್ಯಕ್ತಪಡಿಸಿದರೆ ಅದಕ್ಕಿಂತ ಮೋಜಿನ ಸಂಗತಿ ಬೇರೊಂದಿಲ್ಲ. ಕಡೆಗೂ ಜನರ ವಿರೋಧದ ನಂತರ ೩ ಮರಿ(ಮಾರಿ)ಗಳು ಕ್ಲಿಯರ್ ಆದವು. ಮೊದಲನೆಯದನ್ನು  ಮಧ್ಯಾಹ್ನದ ಸೂರ್ಯ ತಲೆಯ ಮೇಲೆ ಸುಡುತ್ತಿದ್ದಂತೆ ಕದ್ದುಕೊಂಡು ಹೋಗಿದ್ದು ಇಲ್ಲಿನ ಸೆಕ್ಯುರಿಟಿಯ ಬಗ್ಗೆ  ಸಂಶಯ ಮೂಡುತ್ತದೆ. ಜೊತೆಗೆ ಎಲ್ಲಾ ಮರಿಗಳನ್ನು ಹೀಗೆ ಯಾರಾದರು ಕದ್ದುಕೊಂಡು ಹೋಗಲಿ ಎಂಬುದು ಇಲ್ಲಿನ ಜನರ ಆಶಯವಾಗಿತ್ತು ಕೂಡ. ಇಷ್ಟಾದರೂ ರೌಡಿ ನಾಯಿ ರಾಹುವಿನ ರಂಪಾಟ ದಿನೇ ದಿನೇ ಹೆಚ್ಚಾಗತೊಡಗಿತು. ಹಲವರಿಗೆ ಕಚ್ಚಿತು ಕೂಡ. ಆದರೂ ಅದರ ಬಗ್ಗೆ ನಮ್ಮ ಬಿಲ್ಡರ್ ತುಟಿಕ್ ಪಿಟಿಕ್ ಎನ್ನಲಿಲ್ಲ. ಕೆಲವೊಮ್ಮೆ ಅಪಾರ್ಟಮೆಂಟನ್ನು ನಾಯಿಗಳಿಗಾಗಿ ಮಾಡಿದ್ದೋ ಅಥವಾ ಮನುಷ್ಯರಿಗೋ ಇತ್ಯಾದಿ ವಿಚಾರಗಳು ಮನದಲ್ಲಿ ಮೂಡುತ್ತಿದ್ದವು. ಅವುಗಳನ್ನು ಅಪಾರ್ಟಮೆಂಟಿನಿಂದ ಓಡಿಸುವುದು ದೊಡ್ಡ ವಿಷಯವಲ್ಲ ಎಲ್ಲವೂ ಬಿಲ್ಡರ್ ಮಹಾಶಯರ ಅಜ್ಞಾನಕ್ಕೆ ಹಿಡಿದ ಕನ್ನಡಿ ಎಂದರೆ ತಪ್ಪಾಗದು. ಬೆಂಗಳೂರಿನ ಬಿಲ್ಡರುಗಳೇ ರೌಡಿಗಳಲ್ಲವೇ! ಹಣ ಬಲ, ಗ್ಯಾಂಗ್ ಬಲವಿಲ್ಲದಿದ್ದರೆ ಬಿಲ್ಡರ್ ಪಟ್ಟ ಸಿಗುವುದು ಬಹಳ ಕಷ್ಟದ ಕೆಲಸ ಅಥವಾ ಸಾಧ್ಯವೇ ಇಲ್ಲ. ಅವನಂತೆ ಅವನ ನಾಯಿಗಳು ದರ್ಪ ತೋರ್ಪಡಿಸುತ್ತಿರಬಹುದು ಕೂಡ!

ಅಪಾರ್ಟಮೆಂಟಿನಲ್ಲಿ ಇವುಗಳನ್ನು ನೋಡಿಕೊಳ್ಳುವುದು ಮತ್ಯಾರು ಅಲ್ಲ ನಮ್ಮ ವ್ಯಾಚ್-ಮ್ಯಾನ್. ಅಪಾರ್ಟಮೆಂಟ್ ಕಾಯುವವನು ಹೆಚ್ಚಾಗಿ ನಾಯಿಗಳನ್ನೇ ಕಾಯುತ್ತಿದ್ದ. ಮೊದಮೊದಲು ಅವುಗಳ ಚಲನವಲನ ಗಮನಿಸುವುದೇ ಅವನ ಕೆಲಸವಾಗಿತ್ತು. ಸ್ವಲ್ಪ ಕಣ್ಣು ತಪ್ಪಿದರೂ ನಾಯಿಗಳ ಪ್ರಸಾದ ಒಳಗಡೆ ವಿತರಣೆಯಾಗುವುದು ಗ್ಯಾರಂಟಿ! ಅವುಗಳ ಮಲ-ಮೂತ್ರ ಅಪಾರ್ಟಮೆಂಟ್ ಒಳಗಡೆ ಎಲ್ಲೆಲ್ಲೂ ರಾರಾಜಿಸುತ್ತಿದ್ದವು. ಅಪಾರ್ಟಮೆಂಟ್ ಇವುಗಳಿಗೆ ಪಬ್ಲಿಕ್ ಟಾಯ್ಲೆಟ್ ಆಗಿದೆ ಎಂಬುದರಲ್ಲಿ ಸಂಶಯವಿಲ್ಲ (ಬಹುಶಃ ಸುಲಭ ಶೌಚಾಲಯ ಪದ ಸರಿ ಹೊಂದಬಹುದು). ಆದ್ದರಿಂದ ಇವುಗಳು ಎಲ್ಲಿ ಪಾಯಿಖಾನೆ ಮಾಡುವವೋ ಅಥವಾ ಯಾರನ್ನಾದರು ಕಚ್ಚಲು ಹೋಗುವವೋ ಅಥವಾ ಎಲ್ಲಿ ಕಣ್ಣು ತಪ್ಪಿಸಿಕೊಂಡು ಹೋಗುವವೋ ಎಂಬ ಭಯದಿಂದ ತನ್ನ ಸಮಯವನ್ನು ನಾಯಿಗಳನ್ನು ಕಾಯುವುದರಲ್ಲೇ ಕಳಿಯುತ್ತಿದ್ದ. "ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ" ಎಂದು ದಾಸರು ಹಾಡಿದಂತೆ "ಶ್ವಾನ ಮನೆ ಕಾಯುವುದೋ ಮನೆಯವನು ಶ್ವಾನ ಕಾವುದೋ!" ಎನ್ನುವಂತಿತ್ತು ಅವನ ಸ್ಥಿತಿ. ಕಡೆಗೆ ರೋಸಿ ಹೋಗಿ ಎರಡು ನಾಯಿಗಳನ್ನು ಸ್ವತಂತ್ರವಾಗಿ ಬಿಡುತ್ತಿದ್ದ. ಅವುಗಳೋ ಬಿಂದಾಸ್ ತಿರುಗಾಡಿ, ತಮ್ಮ ಬೌ ಬೌ ಪ್ರದರ್ಶಿಸುತ್ತಿದ್ದವು. ಅದರಲ್ಲೂ ಶೂರ್ಪನಖಿಗೆ ಪಕ್ಕದ ಬೀದಿನಾಯಿಗಳಿಂದಲೂ ಆಹ್ವಾನ [ಎಷ್ಟಾದರೂ ಹೆಣ್ಣಲ್ಲವೇ!! ಪ್ರಣಯಿಗಳ ಕಾಟ ಇದ್ದದ್ದೇ!!;)]. ಆದರೆ ರಾಹುವಿಗೆ ಹಲವು ನಾಯಿಗಳು ವಿರೋಧ ಒಡ್ಡಿದ್ದವು. ಅವನು ಬೊಗಳುವಿಕೆಯಿಂದ ಧೈರ್ಯವಂತನೆಂದು ಅನ್ನಿಸಿದರೂ ಮಹಾ ಅಂಜುಬುರುಕ. ತಾಯಿ ಜೊತೆ ಮಾತ್ರ ಅವನ ದರ್ಪ ಇಲ್ಲದಿದ್ದರೆ ಬಾಲ ಮುದುದಿಕೊಂಡು ಇರುತ್ತಾನೆ.

ಕಾವಲುಗಾರನಿಗೆ ಸಾವಿರ ಬಾರಿ ಹೇಳಿದ್ದೂ ಆಯಿತು ನಮ್ಮ ಬಾಯಿ ಒಣಗಿದ್ದು ಆಯಿತು. ಅವನಿಗೆ ವಿವರಿಸುವುದು ಗೋರ್ಕಲ್ಲ ಮೇಲೆ ಮಳೆ ಸುರಿದಂತೆ! ರಾತ್ರಿ ೧೦ ಘಂಟೆಯ ನಂತರ ಅವುಗಳನ್ನು ಕಟ್ಟಿಹಾಕು ಎಂದರೆ ಅವನಿಗೆ ಕ್ಯಾರೆ ಇಲ್ಲ. ಕೇಳಿದರೆ "ಅಂದರ್ ಕುತ್ತೇ ಗಲೀಜ್ ಕರ್ತಾ ಹೈ ಸಾರ್" ಎಂಬುದು ಅವನ ಸಮಜಾಯಿಷಿ. ಅಪಾರ್ಟಮೆಂಟಿನ ನಿರ್ವಹಣೆ ಹಣವನ್ನು ಜೋಡಿಸಿ ಓಡಿ ಹೋದ ಕೆಲಸದವನನ್ನು ಕಂಡು ಇವನಿಗೂ ಧೈರ್ಯ ಉಬ್ಬಿರಬಹುದು. ಇತ್ತೀಚಿಗೆ ನಾಯಿಗೆ ಹಗ್ಗ ಬೇರೆ ಕಟ್ಟುತ್ತಿಲ್ಲ. ಕಟ್ಟಿದರೆ ಫ್ಲಾಟ್ ಆವರಣದಲ್ಲೇ ಅವುಗಳು ಶೌಚ ಮಾಡುತ್ತಾವೆ ಎಂಬುದು ಅವನ ಮತ್ತೊಂದು ಹೇಳಿಕೆ. ಅವುಗಳಿಗೆ ಶೌಚ ಮಾಡಿಸಲು ಇವನೇ ಕರೆದುಕೊಂಡು ಹೋಗಬಹುದು (ಹೋಗುತ್ತಿದ್ದ ಕೂಡ). ಈಗ ಏನೋ ಬದಲಾಗಿದೆ. ಇರುವುದು ಎರಡು ನಾಯಿಯಾದರೂ, ಇವನೇಕೆ ಹೀಗೆ ಮಾಡುತ್ತಿರುವನೋ ತಿಳಿಯದು. ಬಹುಶಃ ಸೋಮಾರಿಯಾಗಿರಬೇಕು ಅಥವಾ ಸ್ವಾರ್ಥವೂ ಅಡಗಿರಬಹುದು.
  • ಇತ್ತೀಚೆಗೆ ಅವನು ಹಲವು ಜಾಗದಲ್ಲಿ ಕೆಲಸ ವಹಿಸಿಕೊಂಡಿದ್ದಾನೆ. ಬೆಂಗಳೂರಿನಲ್ಲಿ ಜೀವನ ನಡೆಸಲು ಇದು ಅನಿವಾರ್ಯ ಕೂಡ. ನಾಯಿಗಳನ್ನು ಸ್ವತಂತ್ರವಾಗಿ ಬಿಟ್ಟರೆ ಅವುಗಳು ಶೌಚವನ್ನು ಮಾಡುವುದಿಲ್ಲ ಜೊತೆಗೆ ಕಾವಲುಗಾರನ ಕೆಲಸವನ್ನು ನಿಭಾಯಿಸುವವು ಎನ್ನುವುದು ಅವನ ಲೆಕ್ಕಾಚಾರ (ಇರುವ ಎರಡು ಶ್ವಾನಗಳು ರೌಡಿಗಳೇ!). ಇದರಿಂದ ಇವನು ಹಾಯಾಗಿ ಹೊರಗಡೆ ಕೆಲಸಮಾಡಲು ಅನುಕೂಲವಾಗುತ್ತದೆ ಕೂಡ
  • ಅಥವಾ ಮೊದಲನೆಯ ನಾಯಿಯ ಕಳ್ಳತನ ಹಾಡುಹಗಲಲ್ಲೇ ಗೊತ್ತಾಗದಂತೆ ನಡೆದಿದ್ದರಿಂದ ಇವನಿಗೆ ತನ್ನ ಕೆಲಸದ ಸಾಮರ್ಥ್ಯದಲ್ಲೂ ಸಂಶಯ ಮೂಡಿರಬಹುದು
  • ಅಥವಾ ತನ ಮುದ್ದಿನ ನಾಯಿಗಳಿಗೆ ನೋವಾಗಬಾರದೆನ್ನುವ ಅವನ ಮಡದಿಯ ಕುಮ್ಮಕ್ಕೂ ಇದ್ದಿರಬಹುದು
  • ಅಥವಾ ಬಿಲ್ಡರ್ ಮಾಲಿಕನೇ ನಾಯಿಗಳನ್ನು ಕಟ್ಟಿಹಾಕಬಾರದೆಂಬ ಕಟ್ಟಪ್ಪಣೆ ವಿಧಿಸಿರಲೂಬಹುದು.

ಇಷ್ಟಾದರೂ ನಾಯಿಗಳ ಶೌಚ ಗೃಹದಲ್ಲಿ ಯಾವುದೇ ಬದಲಾವಣೆಗಳು ಕಾಣಲಿಲ್ಲ. ಅಪಾರ್ಟಮೆಂಟಿನ ಶುಭ್ರ ಕಾಂಕ್ರೀಟ್ ಹಾಸಿನಲ್ಲಿ ಅವುಗಳ ಪ್ರಸಾದ ವಿತರಣೆ ಅಬಾಧಿತವಾಗಿತ್ತು. ಎಷ್ಟೇ ಆದರೂ ನಾಯಿಬುದ್ಧಿ ಅಲ್ಲವೇ! ಒಟ್ಟಾರೆ ಲೆಕ್ಕಾಚಾರ ಮಾಡಿಕೊಂಡೇ ಹೀಗೆ ಹಳಬನೊಬ್ಬ ದುಡ್ಡು ಲಪಟಾಯಿಸಿಕೊಂಡು ಪರಾರಿಯಾಗಿದ್ದೂ ಎಂಬುದು ಮರೆಯಲಾಗದ ಸತ್ಯ :D. ಅಪಾರ್ಟಮೆಂಟಿನ ಸಣ್ಣ ಗೂಡಿನಲ್ಲಿ ವಾಸಿಸುತ್ತಿದ್ದರೂ ಪೊಗಸಾಗಿ ಬೆಳೆದಿದ್ದವು. ಬಿಲ್ಡರ್ ಮಾಲಿಕ ಇವುಗಳಿಗೆ ಸಾವಿರಾರು ರುಪಾಯಿ ಖರ್ಚು ಮಾಡುತ್ತಿದ್ದ. ಪೆಡಿಗ್ರಿ, ಚಿಕನ್, ಹಾಲು, ಇನ್ನೇನು ಬೇಕು ಹೇಳಿ! ಫ್ಲಾಟಿನ ಕೆಲ ಜನರು ಬಿಸ್ಕತ್ ಕೂಡ ಹಾಕುತ್ತಾರೆ. ಒಂತರಾ ಅಪಾರ್ಟಮೆಂಟ್ ಅವುಗಳಿಗೆ ಶ್ವಾನಾಶ್ರಮವಿದ್ದಂತೆ ಎನ್ನಬಹುದು. ಸ್ವಲ್ಪ ದಿನದ ನಂತರ ಪ್ರಾಣಿಪ್ರಿಯರು ಇದರ ಮುಂದೆ ಕಾಣಿಕೆ ಡಬ್ಬಿ ಇಟ್ಟರೂ ಆಶ್ಚರ್ಯವಿಲ್ಲ. ಮತ್ತೂ ಸ್ವಲ್ಪ ದಿನ ಸರಿದರೆ ಪೂಜೆ ಪುನಸ್ಕಾರಗಳು ಜರುಗಬಹುದು.

ಶ್ವಾನ ಗಾಯತ್ರಿ ಮಂತ್ರ ಪಠಿಸಿ ಮತ್ತು ಅದರ ಆಶೀರ್ವಾದಕ್ಕೆ ಪಾತ್ರರಾಗಿ

(ವ್ಯಾಕಾರಣದಲ್ಲಿ ಬಹಳಷ್ಟು ತಪ್ಪಿರಬಹುದು. ದಯವಿಟ್ಟು  ಕ್ಷಮಿಸಿ)

ಬೌ ಶೂರ್ಪದಂತಾಯ ಕರ್ದತಿ
ಸರ್ವದಾ ಕೋಲಾಹಲಂ ಕರೋತಿ
ತನ್ನೋ ಶ್ವಾನ ಚಾತಯತೇಹಮ್

ಹಾಗೆ ಭಕ್ತಿಪೂರ್ಣವಾದ ಭಜನೆಗಳು ಕೂಡ

ಅ ಅ ಅ ಆ ಆ ಆ…

ಶ್ರೀ ಸಾಯಿ ನಿವಾಸ
ಪ್ರಭೋ ಶ್ವಾನೇಶ
ಸದಾ ಗಲಾಟೇಶ, ಸದಾ ಗಲಾಟೇಶಾ



ಅಂದಹಾಗೆ ಕಾವಲುಗಾರನ ಮಡದಿ ಒಂದು ವಿಚಿತ್ರ ಹೆಂಗಸು. ದಿವಸಕ್ಕೆ ೧೬ಘಂಟೆಗಳ ಕಾಲ ಟಿವಿ ನೋಡಿದರೂ ಸಾಲುವುದಿಲ್ಲ. ಅವಳಿಗೆ ಈ ನಾಯಿಗಳೆಂದರೆ ಬಹಳ ಪ್ರೀತಿ. ನಿವಾಸಿಗಳ ಮಾತುಗಳನ್ನು ಕೇಳದಿದ್ದರೂ ನಾಯಿಗಳ ಬೊಗಳುವಿಕೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಳು. "ಟಾಮಿ, ಜಿಮ್ಮಿ" ಅಯ್ಯಯ್ಯೋ ಅದೇನೂ ಪ್ರೀತಿ, ಅದೇನು ಮೋಕೆ. ಕೆಲವೊಮ್ಮೆ ಅಪಾರ್ಟಮೆಂಟಿನ ಪ್ರಾಣಿದಯಾ ಸಂಘದ ಅಧ್ಯಕ್ಷೆಯಂತೆ ಮಾತನಾಡುತ್ತಳೆ. ಹಲವು ಬಾರಿ ನಮ್ಮ ಮಾತುಗಳನ್ನು ಧಿಕ್ಕರಿಸಿದ್ದೂ ಉಂಟು. ನಾಯಿಗಳು ಸ್ವಲ್ಪವೂ ಕಿರುಚಿದರೂ "ಕ್ಯಾ ಹುವಾ ಜಿಮ್ಮಿ, ಕ್ಯಾ ಹುವಾ ಟಾಮಿ" ಎಂದು ಓಡೋಡಿ ಬರುತ್ತಿದ್ದಳು. ತನ್ನ ಮಕ್ಕಳು ತಪ್ಪು ಮಾಡುವಾಗ ಎರಡು ಬಾರಿಸುವವಳು, ನಾಯಿಗಳಿಗೆ ಸ್ವಲ್ಪವೂ ತೊಂದರೆಯಾಗದಂತೆ ನೋಡಿಕೊಂಡಿದ್ದಳು. ಅವಳ ಮುಖಛಾಯೆ ಕಂಡಾಗ ಥಟ್ಟನೆ ಹುಟ್ಟಿಕೊಂಡ ಚುಟುಕು ಕವಿತೆ ಇಂತಿದೆ.

ಮಾಡುವೆನು ನಾನು ನಾಯಿಗಳ ಮೋಕೆ
ಬೆತ್ತ ತಂದು ಅವುಗಳ ಹೊಡೆದರೆ ಜೋಕೆ
ಕೇಳಿದರೆ ನಾಯಿಗಳ ಅಳುವಿನ ಕೇಕೇ
ಹಿಡಿವೆನು ನಾನು ನಿಮಗಾಗಿ ಪೊರಕೆ!


ಅಬ್ಬಬ್ಬಾ। ನಾಯಿಗಳಿಗೆ ಜೋರು ಮಾಡಿದರೆ ಅಥವಾ ಹೊಡೆದರೆ ಅವಳ ಮುಖದಿಂದ ಜ್ವಾಲಾಮುಖಿ ಹೊರಹುಮ್ಮುತ್ತದೆ. ತೋರ್ಪಡಿಸದಿದ್ದರೂ ಆ ಕಾಳಿಯ ಮಹಾಸ್ವರೂಪ ಮುಖ ಚಹರೆಯ ಮೂಲಕ ಪ್ರದರ್ಶನಗೊಳ್ಳುತ್ತದೆ. ಮೊನ್ನೆ ಫೋನ್ ಮಾಡಿ ನಾಯಿಗಳನ್ನು ಓಳಗೆ ಹಾಕಲು ಸೂಚಿಸಿದೆ. "ಹಾ ಟೀಕ್ ಹೈ ಸಾರ್" ಅಂತಾ ಫೋನ್ ಕೆಳಗಿಟ್ಟಳು. ಆದರೂ ನಾಯಿಗಳ ಬೊಗಳುವಿಕೆ ಕಡಿಮೆಯಾಗಲಿಲ್ಲ. ಕೆಳಗೆ ನೋಡಲು ಹೋದಾಗ ಆಶ್ಚರ್ಯ ಕಾದಿತ್ತು. ಪಾರ್ಟಿ ನಾಯಿಗಳನ್ನು ಇನ್ನು ಬೀದಿಯಲ್ಲೇ ಬಿಟ್ಟಿದ್ದಾಳೆ. ಅವಳಿಗೆ ಜೋರು ಮಾಡಿದ ನಂತರವೇ ಅವುಗಳು ಗೂಡು ಸೇರಿದ್ದು! ಇದು ಎಂತಾ ಕಾಲವಯ್ಯ?! ಮಾಲಿಕರಿಗೂ ಒಂದು ಕಾಲ ಕಾವಲುಗಾರರಿಗೂ ಒಂದು ಕಾಲ!! ಎಂದು ಮನದಲ್ಲೇ ಅಂದುಕೊಂಡೆ

ಎಂದಿನಂತೆ ನಾಯಿಗಳು ಕರ್ಕಶ ಧ್ವನಿಯಲ್ಲಿ ರಂಪಾಟ ಮಾಡುತ್ತಿದ್ದವು. ಅಬ್ಬಬ್ಬಾ ಏನೀ ಸ್ವರ, ದಾಸರ ಪದವನ್ನು ಸ್ವಲ್ಪ ಮಾರ್ಪಾಟು ಮಾಡಿದರೆ,

ಕೇಳೆನೋ ಶ್ವಾನ ನಿನ್ನ ದನಿಯ ತಾಳೆನೋ|
ಬೌ ಬೌ ಮಾತ್ರವಿರುವ ಕರ್ಕಶ ಕಂಠದ ಗಾನ||


ತಾಳ್ಮೆ ಕಳೆದುಕೊಂಡು ಕೋಲು ಹಿಡಿದುಕೊಂಡು ಹೋದೆ. ಅಷ್ಟೊತ್ತಿಗೆ ಅದೇ ಅಪಾರ್ಟಮೆಟಿನ ನಿವಾಸಿಯೊಬ್ಬರು (ಪ್ರಾಣಿ ಪ್ರೇಮಿ ಕೂಡ) ಬಂದರು. ಇಂತಹ ಪ್ರಾಣಿ ಪ್ರೇಮಿಗಳೇ ಸಾಮಾನ್ಯ ಜನರ ಪ್ರಾಣ ತಿನ್ನುವುದು. ಅಲ್ಲಿ ನಡೆದ ಸಂಭಾಷಣೆ ಹೀಗಿದೆ.

ಕೆಳಗೆ ಇರುವ ಮಾಹಿತಿ ಎಲ್ಲವೂ ರಿಯಲ್ ಅಲ್ಲ. ಈ ಸಂಭಾಷಣೆಯನ್ನು ಇಂದಿನ ಪ್ರಾಣಿದಯಾ (ಶ್ವಾನ ಪ್ರೇಮಿಗಳು ಎಂಬುದು ಸರಿ ಪದ) ಸಂಘದ ಜನಗಳ ಮನೋಭಾವಕ್ಕೆ ತಕ್ಕಂತೆ ಸ್ವಲ್ಪ ತಿರುಚಿ ಬರೆದಿದ್ದೇನೆ  [ನಮ್ಮ ಭಾರತದ ಮೀಡಿಯಾದವರಂತೆ ;)]. ಮೇಲಿನ ವಾಕ್ಯವು ಈ ಸಂಭಾಷಣೆಗೆ ಡಿಸ್-ಕ್ಲೇಮರ್ ಅಂತಲೂ ತೆಗೆದುಕೊಳ್ಳಬಹುದು

ಇಲ್ಲಿ "X" ನಾಯಿ ಪ್ರಿಯರು, ಮತ್ತು "Y" ನಾಯಿ ವಿರೋಧಿಗಳು. ಹಾಗಂತ ಹೇಳಿ ನಾಯಿ ಪ್ರಿಯರು, ಪ್ರಾಣಿ ಪ್ರಿಯರೆಂಬ generalization ತಪ್ಪೆಂದರೆ ತಪ್ಪಾಗದು ;). ಇದು ಮತ್ತೊಂದು ವಾಕ್ಯಕ್ಕೂ ಸಲ್ಲುತ್ತದೆ!

ಆವರಣದಲ್ಲಿ ಬರೆದಿದ್ದು ಮನಸ್ಸಿನಲ್ಲೇ ಹೇಳಿಕೊಂಡ ಮಾತುಗಳು!

X: (ಮಹಾನ್ ನಾಯಿಪ್ರಿಯರ ಹಾಗೆ ಪೋಸ್ ಕೊಡುತ್ತಾ) ನೀವು ಪಕ್ಕದ ಫ್ಲಾಟಿನವರಾ? ನಾಯಿಗಳೇಕೆ ಬೊಗಳ್ತಾ ಇವೆ ಅಂತ ನೋಡೋಕೆ ಬಂದೆ. ಪಾಪ ತುಂಬಾ ಕೆಲ್ಸ ಮಾಡ್ತಿರ್ಬೇಕು (ಅಂದ್ರೆ ಬೊಗಳಿ ಬೊಗಳಿ ಅವುಗಳ ಕರ್ತವ್ಯ ಪಾಲಿಸುತ್ತಿವೆ ಅಂತಾ)
Y: ಹೌದು ಇಲ್ಲೇ ಪಕ್ಕದ ಬ್ಲಾಕಿನಲ್ಲಿ ಇರುವವರು. ಅಂದಹಾಗೆ ಅವುಗಳ ಕೆಲಸದಿಂದ ನಮಗೆ ಕೆಲಸ ಮಾಡ್ಲಿಕ್ಕೆ ಆಗ್ತಾ ಇಲ್ಲ.

X: ಪಾಪ ಅವುಗಳು ಏನು ಮಾಡ್ತಾವೆ ಮೂಖ ಪ್ರಾಣಿಗಳು. ಹೊಡಿದ್ರೆ ಏನ್ ಗೊತ್ತಾಗುತ್ತೆ. ಆತರ ಎಲ್ಲಾ ಹೊಡಿಬಾರ್ದು. ವ್ಯಾಚ್-ಮಾನ್ ಯಾಕೆ ಹೀಗೆ ಮಾಡ್ತಾನೋ?!
Y: (ಮೂಖ ಪ್ರಾಣಿಗಳ ಸಪೋರ್ಟಿಗೆ ಮೂರ್ಖ ಜನಗಳು ಬಂದರಲ್ಲಪ್ಪಾ!) ಅಲ್ಲಾ ಎಲ್ಲಾರಿಗೂ ತೊಂದರೆ ಆಗುತ್ತೆ ರಾತ್ರಿ ಮಲಗಕ್ಕೆ ಬಿಡಲ್ಲ. ನಾವು ಮಕ್ಕಳಿಗೆ ಹೊಡೆದು ಹೇಗೆ ಬುದ್ಧಿ ಕಲಿಸ್ತೀವೋ ಅದೇ ತರಹ ಅವುಗಳಿಗೆ ಹೇಳಿಕೊಡಬೇಕು

X: ತೊಂದ್ರೆ ಆಗುತ್ತೆ ಅಂದ್ರೆ ಅವುಗಳಿಗೆ ಟ್ರೈನಿಂಗ್ ಕೊಡಿಸ್ಬೇಕು. ಹೊಡಿದ್ರೆ ಏನ್ ಆಗುತ್ತೆ?

ಅಷ್ಟೊತ್ತಿಗೆ ಬಿಸ್ಕತ್ ಪಾಕೆಟ್ ಒಡೆದು ಒಂದೊಂದೇ ಬಿಸ್ಕತ್ತನ್ನು ನಾಯಿಗೆ ಹಾಕುತ್ತಿದ್ದರು ಆದರೆ ಅಲ್ಲೇ ಪಕ್ಕದಲ್ಲಿದ್ದ ಕಾವಲುಗಾರನ ಮಕ್ಕಳು ಮಾತ್ರ ಕಾಣಲಿಲ್ಲ. ಅವುಗಳ ಕಣ್ಣುಗಳು ಪಿಲಿಪಿಲಿ ಎನ್ನುತ್ತಿದ್ದವು, ಬಾಯಿ ತೆರೆದುಕೊಂಡು ಚಪ್ಪೆ ಮೋರೆಯಿಂದ ಇದನ್ನೆ ವೀಕ್ಷಿಸುತ್ತಿದ್ದವು. ಕೊನೆಗೆ ಅವುಗಳಿಗೆ ಆಸೆ ತಡೆಯಲಾರದೆ ಅವರಿಂದ ಕೇಳಿ ಒಂದೆರಡು ಬಿಸ್ಕತ್ತನ್ನು ಪಡೆದರೂ ಕೂಡ.

ಸಂಭಾಷಣೆ ಮುಂದುವರೆಸುತ್ತಾ…

Y: (ಇನ್ನು ನಮ್ ತಲೆ ಹೊಡ್ಕೋಬೇಕು) ಮೊನ್ನೆ ನಮ್ಮ ಮನೆ ಪಕ್ಕ ಗರ್ಭಿಣಿ ಹೆಂಗಸನ್ನು ನಾಯಿಗಳು ಕಚ್ಚಲು ಬಂದಿದ್ದವು.
X: ಪಾಪ ಅದಿಕ್ಕೆ ನಾಯಿಗಳೇನು ಮಾಡಬೇಕು. ಪ್ರೆಗ್ನಂಟ್ ಲೇಡಿಸ್ ಮನೆಯಲ್ಲೇ ಕೂರ್ಬೇಕು ಹೊರಗೆ ಯಾಕೆ   ಬರ್ತಾರೆ? ಎಲ್ಲಾದಕ್ಕೂ ಬಿಲ್ಡರ್ ಕಾರಣ. ಅವನೇ ನಾಯಿಗಳ ತಂದು ಅವುಗಳಿಗೆ ವಾಚ್-ಮನ್ ಕೈಗಳಿಂದ ಹೊಡೆಸುತ್ತಿದ್ದಾನೆ!

Y: ಅಪಾರ್ಟಮೆಂಟ್ ಪೂರ್ತಿ ಟಾಯ್ಲೆಟ್ ಮಾಡಿ ಗಲೀಜು ಮಾಡ್ತಾ ಇದಾವೆ ಆಂಟಿ. ಕೆಲ್ವರ ಮನೆ ಮುಂದೆ ಕೂಡ ಗಲೀಜು ಮಾಡ್ತಾವೆ ಅಂತೆ!
X: ಅಯ್ಯೋ ಪಾಪ ಇವುಗಳಿಗೇನು ಗೊತ್ತಾಗಬೇಕು. ಟ್ರೈನಿಂಗ್ ಕೊಟ್ರೆ ಸರಿ ಹೋಗುತ್ತೆ. ನಾವು ಮೇಂಟೆನೆನ್ಸ್ ಹಣ ಕೊಡಲ್ವೇ ಅದ್ರಲ್ಲೇ ಕ್ಲೀನ್ ಮಾಡ್ಸಿದ್ರೆ ಆಯ್ತು. ಅಷ್ಟಕ್ಕೂ ಇದೇ ನಾಯಿಗಳು ಶೌಚ ಮಾಡಿವೆ ಅಂತ ಖಡಾಖಂಡಿತವಾಗಿ ಹೇಗೆ ಹೇಳ್ತಾರೆ ಜನ?!! ಸುಮ್ನೆ ಮೂಖ ಪ್ರಾಣಿಗಳ ಮೇಲೆ ಆರೋಪ ಹೊರಿಸ್ಬಾರ್ದು!

Y: ಅಲ್ಲಾ ಆಂಟಿ ಮೇಂಟೆನೆನ್ಸ್ ಹಣ ನಾವು ಅಪಾರ್ಟಮೆಂಟಿನ ಅಭಿವೃದ್ಧಿಗೆ ಬಳಸ್ತಾ ಇರೋದು. ಇದು ನಾಯಿಯನ್ನ ಬಲವಂತವಾಗಿ ಬಿಲ್ಡರ್ ಇಲ್ಲಿ ತಂದಿರಿಸಿದ್ದಾನೆ. ಅವುಗಳು ಇಲ್ದೆ  ಇರೋವಾಗ ಇಲ್ಲಿ ಎಲ್ಲವೂ ಕ್ಲೀನಾಗಿ ಸರಿಯಾಗಿಯೇ ಇತ್ತು
X: ಆತರ ಈಗೇನಾಗಿದೆ!! ಇರ್ಲಿಬಿಡ್ರಿ ಹಳೇದನ್ನ ಯಾಕೆ ನೆನಪಿಸಿಕೊಳ್ಳೋದು. ಪಾಪ ಈ ನಾಯಿಗಳಿಗೆ ಸ್ವಲ್ಪ ಅದ್ರಲ್ಲೇ ಖರ್ಚು ಮಾಡೋದ್ರಲ್ಲಿ ಏನು ತಪ್ಪಿದೆ?!

X: ನಾನು ೧೫ ವರ್ಷ ನಾಯಿ ಸಾಕಿದ್ದೇನೆ. ಅವುಗಳ ಕಷ್ಟ ಏನೆಂಬುದು ಚೆನ್ನಾಗಿ ಅರಿವಿದೆ ಕೂಡ. ಇಲ್ಲಿ ಸಿಟಿನಲ್ಲಿ ಸಾಕ್ಲಿಕ್ಕೆ ಆಗಲ್ಲ ಅಂತ ತುಂಬಾ ಬೇಸರ ಇದೆ.
Y: (ಅಬ್ಬಾ ಬಚಾವ್! ಇಲ್ಲಾಂದ್ರೆ ಮತ್ತಷ್ಟು ಗಲಾಟೆ ಸಹಿಸೋದು ಸಾಧ್ಯವೆ ಇರ್ತಾ ಇರ್ಲಿಲ್ಲ)

Y: ಆಂಟಿ ಇವುಗಳಿಗೆ ವ್ಯಾಕ್ಸಿನೇಷನ್ ಕೂಡ ಕೊಡಿಸಿಲ್ಲ. ಕಚ್ಚಿದರೆ ಇಲ್ಲಿಯವರಿಗೆ ರೇಬಿಸ್ ರೋಗ ಬರೋ ಚಾನ್ಸಸ್ ಇದೆ
X: ಅಯ್ಯೊ ಪಾಪ ಅವುಗಳಿಗೇನು ತಿಳಿಬೇಕು ಯಾರು ಒಳ್ಳೇರು ಯಾರು ಕೆಟ್ಟೋರು ಅಂತಾ. ಎಲ್ರು ಅದಿಕ್ಕೆ ದಿನ ಊಟ ಹಾಕಬೇಕು. ಆವಾಗ ಯಾರಿಗೂ ಕಚ್ಲಿಕ್ಕೆ ಹೋಗಲ್ಲ! ಒಬ್ಬೊಬ್ರು ಒಂದೊಂದು ದಿನ ನಾಯಿ ಸೇವೆ ಮಾಡ್ಬೇಕಪ್ಪ. ನಾಯಿ ಸೇವೆ ನಾರಾಯಣ ಸೇವೆ ಅಂತಾರೆ, ಇಲ್ಲಿಯವರು ಅದನ್ನೇ ಪಾಲಿಸಿದ್ರೆ ಪುಣ್ಯನೂ ಬರುತ್ತೆ, ನಾಯಿಗಳ ಆಶೀರ್ವಾದನೂ ಪ್ರಾಪ್ರ್ತಿಯಾಗುತ್ತೆ! ಅವುಗಳಿಗೆ ಚುಚ್ಚುಮದ್ದು ಕೊಟ್ರೆ ಪಾಪ ನೋವಾಗೊಲ್ವಾ, ಪಾಪ! ಹೇಳಕ್ಕೆ ಬಾಯಿನೂ ಬರಲ್ಲ ಮೂಖ ಪ್ರಾಣಿಗಳಿಗೆ (ಇನ್ನೊಂದೆರಡು ಬಿಸ್ಕತ್ ಎಸೆಯುತ್ತಾ)

Y: ಹಾಗಲ್ಲ ಆಂಟಿ, ರಾತ್ರಿ ಪೂರ್ತಿ ಗಲಾಟೆ ಮಾಡುತ್ತೆ ನಿದ್ದೆ ಮಾಡ್ಲಿಕ್ಕೂ ಬಿಡಲ್ಲ. ಈ ನಾಯಿಗಳು ಇಲ್ಲಿ ಇರ್ಬಾರ್ದು.
X: ಅಯ್ಯೊ ಪಾಪ ಬೊಗಳೋದು ಅವುಗಳ ಸ್ವಭಾವ. ಹಾಗಂತ ಮಗು ಅಳುತ್ತೆ ಅಂತ ಮನೆಯಿಂದ ಹೊರಗಡೆ ದಬ್ಬಲಿಕ್ಕೆ ಆಗುತ್ತಾ?!!! ನಿದ್ದೆ ಮಾಡೋರಿಗೆ ಗೊತ್ತಾಗ್ಬೇಕು. ಮಕ್ಳು ಮಲ್ಗೋವಾಗ ಪೋಷಕರು ಮಲ್ಕೊಂಡಂಗೆ, ಜನರು ನಾಯಿ ಮಲಗಿದಾಗ ಮಲಗ್ಬೇಕಪ್ಪಾ! ಇಲ್ಲಾಂದ್ರೆ ಅಡಿಗೆ ಮನೆ ಸೇರಿ ನಾಲ್ಕು ರೂಮ್ ಇದೆಯಲ್ವ ಎಲ್ಲಾ ಮನೆಯಲ್ಲೂ, ಎಲ್ಲಿ ನಾಯಿ ಸೌಂಡ್ ಕಡಿಮೆ ಕೇಳುತ್ತೋ ಅಲ್ಲೇ ಮಲ್ಕೊಳ್ಳಿ ಜನಗಳು! ಇಲ್ಲಾಂದ್ರೆ ಮನೆಗಳಿಗೆ ಸೌಂಡ್ ಪ್ರೂಫ್ ಗ್ಲಾಸುಗಳನ್ನು ಹಾಕಿಸಿ :P

Y: (ಅಯ್ಯಮ್ಮ! ಈ ಜನ ಪಕ್ಕ ಶ್ವಾನದಯಾ ಸಂಘದ ಸದಸ್ಯರೇ ಇರಬೇಕು. ನಾಯಿಗಳ ಎಲೆಕ್ಷನ್ ನಲ್ಲಿ ನಿಂತರೆ ಇವ್ರು ಸಂಪೂರ್ಣ ಬಹುಮತ ಪಡೆಯೋದು ಖಂಡಿತ. ಇನ್ನು ಏನೇನ್ ಕೇಳಬೇಕಾಗುತ್ತೋ ಇವ್ರ ಬಾಯಿಯಿಂದ. ಬಹುಶಃ ಇವರಿಗೆ ಭೌತಶಾಸ್ತ್ರದ "total internal reflection" ನಿಯಮ ರಾತ್ರಿ ಸಮಯದಲ್ಲಿ ಹೇಗೆ ಅನ್ವಯವಾಗುತ್ತೆ ಅನ್ನುವುದು ಹೇಳಿಕೊಡಬೇಕೆನೋ?)

Y: ಅಲ್ಲಾ ಆಂಟಿ, ಅವುಗಳಿಗೆ ಸರಪಳಿ ಆದ್ರು ಬಿಗಿಬೇಕು. ಇಲ್ಲಾಂದ್ರೆ ಅಪಾರ್ಟಮೆಂಟ್ ಪೂರ್ತಿ ಹೊಲಸು ಮಾಡುತ್ತೆ ಮತ್ತು ಗಲಾಟೆ ಮಾಡುತ್ತೆ ಕೂಡ.
X: ಅಯ್ಯೋ ಪಾಪ ಅವುಗಳಿಗೇನು ಫ್ರೀಡಮ್ ಬೇಡ್ವಾ? ಈಗ ನೀವು ಕಟ್ಟಿ ಹಾಕಿದರೆ ಏನ್ ಮಾಡ್ತೀರಾ?! ನಿಮ್ಮನ್ನ ಕಟ್ಟಿ ಹಾಕಿದರೆ ಸರಿ ಕಾಣ್ಸುತ್ತಾ?!! ನಾಯಿಗೂಡಿನ ಒಳಗೆ ಇಟ್ರೆ ಅಲ್ಲೇ ಹೊಲಸು ಮಾಡುತ್ತೆ ಪಾಪ ಅವುಗಳು ಹೇಗೆ ಇರೋದು. ಅವುಗಳಿಗೇನು ತೊಳಿಲಿಕ್ಕೆ ಬರುತ್ತಾ. ಮನೆ ಮುಂದೆ ಆದ್ರೆ ಅಟ್ಲೀಸ್ಟ್ ಮನೆಯವರು ತೊಳೆದು ಕ್ಲೀನ್ ಮಾಡ್ಲಿಕ್ಕೆ ಎಷ್ಟು ಹೊತ್ತು ಬೇಕಾಗುತ್ತೆ?!! ಬಹುಶಃ ಯಾರೋ ನಾಯಿಗಳ ವಿರೋಧಿಗಳು ಇವುಗಳನ್ನ ಓಡಿಸಲಿಕ್ಕೆ ಹೊರಗಿಂದ ಮಲವನ್ನು ತಂದು ಅಪಾರ್ಟಮೆಂಟಿನಲ್ಲಿ ಹಾಕ್ತಾ ಇರಬಹುದು ಕೂಡ!! ಯಾರಿಗೊತ್ತು? ಅಷ್ಟಕ್ಕೂ ಪಾಪ ಅವಗಳಿಗೆ ಸೆಕೆ ಆಗಲ್ವಾ ಗೂಡಿನೊಳಗಿಟ್ರೆ, ಬಿಲ್ಡರ್ AC ಕೂಡಾ ಹಾಕಿಸ್ಬೇಕಪ್ಪಾ ಅವುಗಳಿಗೆ!!

Y: (ಅಯ್ಯಪ್ಪಾ ನಮ್ಮ ಕೇಜ್ರಿವಾಲ್ ಅಲಿಯಾಸ್ ಕ್ರೇಜಿವಾಲ್ ಅವರನ್ನೇ ಮೀರಿಸುವಂತಹ ಹೇಳಿಕೆಗಳು. ಇವ್ರ ಜೊತೆ ಮಾತನಾಡೊದಕ್ಕಿಂತ ಸುಮ್ನೆ ವಾಕಿಂಗ್ ಮಾಡಿದ್ರೆ ನಮ್ಮ ದೇಹದ ಕೊಬ್ಬಾದ್ರು ಇಳಿಯುತ್ತೆ. ಇವ್ರ ಕೊಬ್ಬು ಇಳಿಯೋ ತರ ಕಾಣಿಸ್ತಾ ಇಲ್ಲ. ಇವ್ರ "ಪಾಪ" ಶಬ್ಧದ ಅತಿಯಾದ ಬಳಕೆ ಕೇಳಿದಾಗ ವಿರೋಧಿಗಳಾದ ನಮ್ಮನ್ನು ಪಾಪಿ ಎಂದು ಉದ್ಧರಿಸುತ್ತಿರಬಹುದೇ?!)

ಸುಮ್ನೆ ಮೂಖ ಪ್ರಾಣಿಗಳ ಬಗ್ಗೆ ಮೂರ್ಖರ ಜೊತೆ ಮಾತನಾಡಿ ಸಮಯ ವ್ಯರ್ಥ ಮಾಡುವುದು ತರವಲ್ಲ ಎಂದು ಮುಂದಿನ ಹೆಜ್ಜೆ ಹಾಕಿದನು.

ಪರದೆ ಸರಿಯುತ್ತಿದೆ ಎನ್ನುವಷ್ಟರಲ್ಲಿ ಅಪಾರ್ಟಮೆಂಟಿನ "nextGen" ಯುವಕನೊಬ್ಬ ಬಂದು "ಏ ವ್ಯಾಚ್-ಮನ್ ಕ್ಯೂಂ ಇನ್ ಸುಂದರ್ ಕುತ್ತೋಂಕೋ ದೂಸ್ರೋ ಕೋ ದೇ ರಹೇಹೋ" ಅಂತ ರಾಹುವಿನ ಮೈ ಸವರಿದ. ಮೊನ್ನೆ ಇವನೇ ನಾಯಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಹೋಗಿದ್ದ. ಬಹುಶಃ ಈ ಕುಟಿಲ ಪ್ರಾಣಿಪ್ರಿಯನ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಜಾಲಾಡುತ್ತಿರಬಹುದು.

ಮೋಜಿಗಾಗಿ ಹುಲಿಗಳನ್ನು ಕೊಲ್ಲುತ್ತಿದ್ದ ಬ್ರಿಟಿಷರು, ಶೋಕಿಗಾಗಿ ನಾಯಿಗಳನ್ನು ಸಾಕುತ್ತಿದ್ದರು. ಅದೆ ಚಾಳಿ ನಮ್ಮಲ್ಲೂ ಬೇರೂರಿದೆ. ಹುಲಿಗಳ ಸಂಖ್ಯೆ  ದಯನೀಯವಾಗಿ ಇಳಿಮುಖವಾದರೆ, ಬೀದಿ ನಾಯಿಗಳ ಸಂಖ್ಯೆ ಮನುಷ್ಯರನ್ನು ಮೀರಿಸುವಷ್ಟು ಹೆಚ್ಚಾಗಿದೆ! ಪರಿಸರ ಸಮತೋಲನ (ecological balance) ಕಾಪಾಡುವುದು ನಾಯಿಗಳ ಸಂರಕ್ಷಣೆಯಿಂದಲ್ಲ ಬದಲಾಗಿ ವನ್ಯಜೀವಗಳ ಸಂರಕ್ಷಣೆಯಿಂದ ಎನ್ನುವುದು ಸಿಟಿ ನಾಯಿ ಪ್ರಿಯರಿಗೆ ಎಂದು ತಿಳಿವುದೋ? ಪಾಶ್ಚಾತ್ಯ ದೇಶಗಳಲ್ಲಿ ಸಂಬಂಧಗಳ ಕೊರತೆ ಇರುವುದರಿಂದ ಅಲ್ಲಿನ ಜನರು ನಾಯಿ ಬೆಕ್ಕುಗಳ ಮೊರೆ ಹೋಗುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳದ ನಮ್ಮ ಇಂಡಿಯಾದ ಮಂದಿ ಸುಮ್ಮನೆ ಅನುಕರಣೆ ಮಾಡುವುದರಲ್ಲಿ ತೊಡಗಿಸಿಕೊಂಡಿರುವುದು ಹಾಸ್ಯಾಸ್ಪದ ಸಂಗತಿ. ಭಾರತ ದೇಶವೇ ವೈರುಧ್ಯಗಳ ಮಹಾಸಾಗರ. ಇಲ್ಲಿನ ಅಮೋಘವಾದ ಸಾವಿರಾರು ವರುಷಗಳ ಇತಿಹಾಸವುಳ್ಳ, ಲಕ್ಷಾಂತರ ಎಕರೆ ಪ್ರದೇಶದಲ್ಲಿ ಆವರಿಸಿಕೊಂಡಿರುವಂತಹ ಪಶ್ಚಿಮ ಘಟ್ಟ ಶ್ರೇಣಿಗಳನ್ನು ಕಡಿದು ಅದರ ಗಣಿಯನ್ನು ನುಂಗಿಕೊಂಡು, ಅಲ್ಲಿನ ತೇಗದ ಮರಗಳನ್ನು ತೇಗಿ, ನಾಲ್ಕು ಕಾರುಗಳ ಮಾಲಿಕನಾಗಿ, ಬೆಂಗಳೂರಿನ ನಾಲ್ಕು ಮರಗಳನ್ನು ಉಳಿಸಿದವ, ಪರಿಸರವಾದಿ ಸಂಘದ ಅಧ್ಯಕ್ಷ ಕೂಡ ಆಗಬಹುದು. ವನ್ಯಜೀವಿಗಳನ್ನು ಮೋಜಿಗಾಗಿ ಕೊಂದು, ಅಹೋರಾತ್ರಿ ಬೊಗಳಿ ಶಾಂತಿ ಕದಡುವ ತನ್ನ ಮನೆಯ ಅಥವಾ ಬೀದಿ ನಾಯಿಗಳ ಜೊತೆ ಸೆಲ್ಫಿ ತೆಗೆಸಿಕೊಂಡವ ಪ್ರಾಣಿ ದಯಾ ಸಂಘದ ಅಧ್ಯಕ್ಷನಾಗಲು ಅರ್ಹನಾಗುವನು. ಬಹುಶಃ ವೈರುಧ್ಯವೇ ಕಲಿಯುಗದ ನಿಯಮ ಇರಬೇಕು.

"Dog is human's best friend  and Human is his worst enemy" ಎನ್ನುವುದು ಹಳೆ ನೀತಿ. ಇದನ್ನೇ ನೋಡಿ ಏಕಮುಖ ಯೋಚನೆ ಅನ್ನುವುದು (unidirectional thinking). ವಾಸ್ತವದಲ್ಲಿ ಇದು ನಾಯಿಗಳಿಗೂ ಅನ್ವಯಿಸುತ್ತದೆ. ಪಕ್ಕದ ಬೀದಿಯ ನಾಯಿಗಳಿಗೆ ಇನ್ನೊಂದು ಬೀದಿಯ ನಾಯಿಗಳ ಕಂಡರಾಗದು. ನಾಯಿ ಮನುಷ್ಯನ ಅತಿ ದೊಡ್ಡ ಸ್ನೇಹಿತ ಎಲ್ಲರೂ ಎನ್ನುತ್ತಾರಾದರೂ ಅದೇ ನಾಯಿಗೆ ಪಕ್ಕದ ಬೀದಿಯ ನಾಯಿಯ ಕಂಡರಾಗದು. ಅಂದರೆ ಮನುಷ್ಯನಿಗೆ ಮನುಷ್ಯನು ಎಷ್ಟು ದೊಡ್ಡ ಶತ್ರುವೋ ಅದೇ ರೀತಿಯಲ್ಲಿ ನಾಯಿಗಳಿಗೂ ಕೂಡ. ಅವುಗಳು ಮೇಲಿನ ಆಂಗ್ಲ ವಾಕ್ಯವನ್ನು ಸ್ವಲ್ಪ ತಿರುಚಿ ತಮ್ಮ ಜೀವನಶೈಲಿಗೆ ಅಳವಡಿಸಿಕೊಂಡಿರಲೂಬಹುದು ಮತ್ತು ವಾಸ್ತವವನ್ನು ಅರಗಿಸಿಕೊಂಡಿರಬಹುದು!

ದಯೆಯೇ ಧರ್ಮದ ಮೂಲವಯ್ಯ ಆದರೆ ಇಂತಹ ದಯೆ ಪರರಿಗೆ ಮುಳುವಾಗಬಾರದು. ಖ್ಯಾತ ಆರ್ಥಿಕ ತಜ್ಞ Dave Ramsey ಹೇಳಿದಂತೆ "We buy things we don't need with money we don't have to impress people we don't like"; ನಾವು ಪ್ರತಿಯೊಂದನ್ನು ಅನ್ಯರ ರಿಪೋರ್ಟ್ ಕಾರ್ಡಿಗಾಗಿ ಮಾಡುತ್ತೇವೆಯೇ ವಿನಹಾ ನಮಗಾಗಿ ಅಲ್ಲ. ಒಬ್ಬ ತೇಗದ ಪೀಠೋಪಕರಣ ತಯಾರಿಸಿದರೆ ಮತ್ತೊಬ್ಬ ಅವನನ್ನು ಮೀರಲು ರೋಸ್-ವುಡ್ ನಿಂದ ಮಾಡಿಸುತ್ತಾನೆ. ಒಟ್ಟಿನಲ್ಲಿ ಕಾಡಿನ ೪-೫ ಮರಗಳು ಧರಾಶಾಯಿಯಾಗಿ ಅದರ ಪಕ್ಷಿಗಳ ಬದುಕು ಮಣ್ಣುಪಾಲಾಗುತ್ತದೆ; ವಾತಾವರಣದಲ್ಲಿನ ಆಮ್ಲಜನಕ ಕಡಿಮೆಯಾಗುತ್ತದೆ; ಮಳೆ ಕುಂಠಿತವಾಗುತ್ತದೆ; ಕಾಡುಪ್ರಾಣಿಗಳಿಗೆ ನೆರಳು ಇಲ್ಲವಾಗುತ್ತದೆ. ಅತ್ತ ರೋಸ್-ವುಡ್ ನಲ್ಲಿ ಕುಳಿತು ನಾಯಿ ಜೊತೆ ಫೋಸ್ ಕೊಡುವವನು ಪ್ರಾಣಿಪ್ರಿಯನಾಗುತ್ತಾನೆ. ಇದೆ ಜಗದ ವಿಪರ್ಯಾಸವೆನ್ನಬಹುದೇ?

ಇಂದು ಕೂಡ ಕೆರೆ ಬದಿಯ ಮುಂಜಾನೆಯ ಹಕ್ಕಿಗಳ ಚಿಲಿಪಿಲಿಯ ಬದಲು ಈ ಮೂರ್ಖ ಶ್ವಾನಗಳ ವ್ಯರ್ಥ ಆರ್ತನಾದ ಕೇಳುವುದು ನಮ್ಮ ದೌರ್ಭಾಗ್ಯವಾಗಿದೆ. ಲಕ್ವ ಹೊಡೆದಂತೆ ಕಿರುಚುವ, ರಾಜಾರೋಷವಾಗಿ ತಿರುಗಾಡಿ ರಕ್ಕಸನಂತೆ ವರ್ತಿಸುವ ನಾಯಿಗಳನ್ನು ಕಂಡಾಗ ಅಪಾರ್ಟಮೆಂಟಿನ ಸಧ್ಯದ ಸ್ಥಿತಿ "The anarchy of bitches" ಅಂತ ಕಠೋರವಾಗಿ ನುಡಿದರೂ ಉತ್ಪ್ರೇಕ್ಷೆಯಲ್ಲ!! ಹಲವು ನಿವಾಸಿಗಳ ವಿರೋಧದ ನಡುವೆಯೂ ನಾಯಿಗಳನ್ನು ಬಿಲ್ಡರ್ ಇಲ್ಲಿಯೇ ಇಟ್ಟಿದ್ದಾನೆ. ಯಾರೊಬ್ಬರಿಬ್ಬರು ಅದರ ಬೆಂಬಲಕ್ಕೆ ನಿಂತರೆಂದು ಬಹುಜನರ ವಿರೋಧವನ್ನು ಧಿಕ್ಕರಿಸುವಷ್ಟು ಉದ್ಧಟತನ ಬಿಲ್ಡರಿನದು. ಭಾರತದ ನೀತಿಯೇ ಮೈನಾರಿಟಿ ಡ್ರಿವೆನ್ ಅಲ್ಲವೇ! ಅವನ ಮನೆಯಲ್ಲಿನ ಕಾಟ ತಾಳಲಾರದೆ ಇಲ್ಲಿಗೆ ತಂದು ನಿವಾಸಿಗಳಿಗೆ ಕಾಟ ಕೊಡುವುದು ಅವನ ದುರುದ್ದೇಶ ಅಂದರೂ ತಪ್ಪಿಲ್ಲ. ಹಾಗಂತ ಹೇಳಿ ನಾಯಿಯ ಮೇಲಿನ ಪ್ರೀತಿ ಕಡೆಮೆಯಾಗಿಲ್ಲ ಇಲ್ಲವಾದಲ್ಲಿ ನಾಯಿಯನ್ನು ಯಾವಾಗಲೋ ಉಚ್ಚಾಟಿಸುತ್ತಿದ್ದ ಕೂಡ. "ಹಾವೂ ಸಾಯಬಾರದು ಕೋಲೂ ಮುರಿಯಬಾರದು" ಎನ್ನುವ ನೀತಿ. ಒಟ್ಟಿನಲ್ಲಿ ನಿವಾಸಿಗಳು ತೊಂದರೆ ಅನುಭವಿಸಬೇಕಷ್ಟೇ!

ಈಗಿನ ಸುದ್ಧಿಯ ಪ್ರಕಾರ, ಯಾರೊಬ್ಬರು ನಿವಾಸಿ ರಾಹುವಿನ ಬಗ್ಗೆ ಅತಿಯಾದ ಮೋಹ ತೋರಿಸಿದ್ದಾರೆ. ಅವನನ್ನು ತನ್ನ ಮನೆಯ ನಾಯಿಯೆಂದು ಸ್ವೀಕರಿಸಿದ್ದಾರೆ. ಅವನನ್ನು ಮನೆಯ ನಾಯಿ ಎಂದಿದ್ದರೂ ಪಬ್ಲಿಕ್ ಜಾಗದಲ್ಲೇ ಇರಿಸಿದ್ದಾರೆ. ಪರಿಣಾಮವಾಗಿ ನಮ್ಮ ತೊಂದರೆ ಅಭಾದಿತ! ಯಾರು ಮರಿಯನ್ನು ತೆಗೆದುಕೊಂಡು ಹೋಗುವ ಬೇಡಿಕೆ ಇಡುತ್ತಾರೋ ಅವರನ್ನು ವಿರೋಧಿಸಿ ತಾವೆ ಇಟ್ಟುಕೊಂಡಿದ್ದಾರೆ ಮಹಾಶಯರು. ಇದರಿಂದಾಗಿ ರಾಹು ಇನ್ನು ಅಪಾರ್ಟಮೆಂಟಿನಲ್ಲೇ ಉಳಿದಿದ್ದಾನೆ :(. ಹೋದ್ರೆ ಪಿಶಾಚಿ ಅಂದ್ರೆ ಬಂತು ಗವಾಕ್ಷಿ ಅನ್ನೋ ತರ ಕೆಲವು ಫ್ಲಾಟ್ ನಿವಾಸಿಗಳೇ ನಮ್ಮ ಕಷ್ಟ ಹೆಚ್ಚಿಸಿದ್ದಾರೆ. ಇವರು ಕೂಡ ರೋಸ್-ವುಡ್ ಸಿಟಿಜೆನ್. ಏನು ಮಾಡುವುದು ದಾಸರು ಬಹಳ ಹಿಂದೆಯೇ ನುಡಿದಿದ್ದರು "ಹರಿ ಹರಿ ನಿಮ್ಮನು ಮೆಚ್ಚಿಸಬಹುದು, ಪಾಪಿ ನರರನೊಲಿಸುವುದು ಬಹು ಕಠಿಣ" :(.

ಮೇಲೆ ಹೇಳಿರುವ ಅಂಶಗಳು ಅತಿಶಯೋಕ್ತಿ ಎನಿಸಬಹುದು. ಹೇಳಿಕೊಳ್ಳುವವರು ಹೇಳುತ್ತಾರೆ ಆದರೆ ನಮ್ಮ ಕಷ್ಟ ನಮಗೆ :(

No comments:

Post a Comment

Printfriendly

Related Posts Plugin for WordPress, Blogger...