Saturday, May 28, 2016

ಗುಂಡನ ಪ್ರೀಪೈಡ್ ಕಥೆ

ಗುಂಡನಿಗೂ ಪ್ರತಿ ತಿಂಗಳು ಅತಿಯಾದ ಮೊಬೈಲ್ ರೆಂಟ್ ಕಟ್ಟಿ ಬೇಸರವಾಗಿತ್ತು. ಆದಷ್ಟು ಬೇಗ ಪ್ರೀಪೈಡ್ ಮಾಡೋಣ ಅಂದ್ರೆ ಯಾಕೋ ಉದಾಸೀನದ ರೋಗ. ಮಡದಿ ಎಷ್ಟು ಬಾರಿ ನೆನಪಿಸಿದರೂ ಏನಾದರೂ ನೆಪ ಹಾಕಿಕೊಂಡು ತಪ್ಪಿಸುತ್ತಿದ್ದ. ಇರುವ ಒಂದು ನಂಬರನ್ನು ಪ್ರೀಪೈಡ್ ಪ್ಲಾನ್ ಗೆ ವರ್ಗಾಯಿಸುವ ತವಕ ಇದ್ದರೂ ಸೋಮಾರಿತನ ಮೈ ಬಿಡಲು ಕೇಳುತ್ತಿರಲಿಲ್ಲ. ಅದರ ಜೊತೆ ಅಳುಕು ಬೇರೆ. ಅಂತರ್ಜಾಲದಲ್ಲಿ ರಿವ್ಯೂಗಳನ್ನು ಕಂಡಾಗ ಅದರಲ್ಲಿನ ಹಲವರ ಕಷ್ಟಗಳನ್ನು ಹೇಳಿಕೊಳ್ಳುವ ರೀತಿಯನ್ನು ಕಂಡು ಅವನಿಗೆ ಮನಸ್ಸೇ ಇರಲಿಲ್ಲ. ಆದರೂ ತಿಂಗಳ ಕೊನೆಗೆ ಸಿಕ್ಕಾಪಟ್ಟೆ ಮೊಬೈಲ್ ಬಿಲ್ ಬಂದಾಗ ಹೊತ್ತಿ ಉರಿಯುತ್ತಿದ್ದ. ಅವನು ಖರ್ಚು ಮಾಡುವುದಕ್ಕಿಂತ ಮೂರು ಪಟ್ಟು ಬಿಲ್ ಬರುತ್ತಿತ್ತು. ಬಿಲ್ ಕಟ್ಟಿ ಮೂರು ದಿನಗಳವರೆಗೆ ಇದೆ ರೋದನೆ. ಮಡದಿಗೂ ರೋಸಿಹೋಗಿತ್ತು. "ನನಗ್ಯಾಕಿ ಹೇಳ್ತೀರಾ… ಬೇಕಾದ್ರೆ ವರ್ಗಾಯಿಸಿ ಬನ್ನಿ. ಎಷ್ಟು ಸಲ ಅಂತ ಹೇಳೋದು…?!" ಎನ್ನುವುದು ಅವಳ ಅಳಲು. ರೋದನೆ ತಾರಕಕ್ಕೇರಿ ಮಡದಿ ಜೋರು ಮಾಡಿದಾಗ, ಮ್ಯಾಟರ್ ಅಲ್ಲೇ ಚಪ್ಪೆ ಆಗುತ್ತಿತ್ತು. ಪ್ರತಿ ತಿಂಗಳು ಮಡದಿ ರಿಮೈಂಡರ್ ಇಟ್ಟರೂ ಯಾವುದಕ್ಕೂ ಪ್ರಯೋಜನವಾಗಿರಲಿಲ್ಲ.

ಹಾಗಂತ ಹೇಳಿ ಗುಂಡ ಪ್ರಯತ್ನವೇ ಪಟ್ಟಿರಲಿಲ್ಲ ಎಂಬರ್ಥವಲ್ಲ. ಒಂದೆರಡು ಬಾರಿ ಹೋದಾಗ "ನಿಮ್ಮ ಬಿಲ್ಲಿಂಗ್ ದಿವಸ ಬನ್ನಿ" ಎಂದು ಅಂಗಡಿಯವರು ವಾಪಾಸ್ ಕಳಿಸುತ್ತಿದ್ದರು. ಅಂತರ್ಜಾಲದಲ್ಲಿ ಪ್ರೊ-ರೇಟ್ ಕಟ್ಟಿದರೆ ಸಾಕು ಎಂದಿದ್ದರೂ, ಈ ಕಚೇರಿಯವರು ಬೇರೆಯೇ ತಗಾದೆ ತೆಗೆಯುತ್ತಿದ್ದರು. "ಥೂ ಈ ಇಂಡಿಯಾದಲ್ಲಿ ಹೀಗೆನೇ! ಯಾರು ರೂಲ್ಸ್  ಫಾಲೋ ಮಾಡಲ್ಲ" ಎಂದು ಎರಡು ಮೂರು ದಿನ ಹಾಗೆ ಸಿಡುಕುತ್ತಿದ್ದನು. ಮಡದಿಗೂ ಇಂತಹ ದುರ್ವರ್ತನೆ ಸಹಿಸಲಾಗದಿದ್ದರೂ ಅವನಿಗೆ ರಿಮೈಂಡ್ ಮಾಡಲು ಮರೆಯುತ್ತಿರಲಿಲ್ಲ.

ಹೀಗೆ ಒಂದು ವರ್ಷವೇ ಕಳೆದಿರಬೇಕು. ಖರ್ಚು-ವೆಚ್ಚಗಳು ಹೆಚ್ಚಾಗತೊಡಗಿದಂತೆ, ಇವನಿಗೆ ಮೊಬೈಲ್ ವರ್ಗಾಯಿಸುವುದು ಅನಿವಾರ್ಯವಾಯಿತು. "ನಿಮ್ಮ ಮೊಬೈಲ್ ನೆಟ್ವರ್ಕ್ ಪ್ರೀಪೈಡ್ ವರ್ಗಾಯಿಸಿ, ಇಲ್ಲ ಖರ್ಚು ಹೆಚ್ಚಾಯಿತೆಂದು ಗೋಳು ಹೊಯ್ಕೋಬೇಡಿ" ಎಂದು ಮಡದಿ ಗುಡುಗಿದಳು. ಇವನಿಗೆ ಅಂದು ಏನು ಮನಸಾಯಿತೋ, ಸೀದಾ ಅಂಗಡಿ ಕಡೆಗೆ ತೆರಳಿದ. ತೆರಳುವ ಮುನ್ನ ಅಂಗಡಿಯವರು ವಕ್ರ ಉತ್ತರ ನೀಡಿದರೆ ಹೇಗೆ ನಿಭಾಯಿಸಬೇಕೆನ್ನುವ ಎದುರುತ್ತರವನ್ನು ಬಾಯಿಪಾಠ ಮಾಡಿಕೊಂಡು ಹೋಗಿದ್ದ. ಬೈಕ್ ತೆಗೆದುಕೊಂಡು ಸೀದಾ ಅಂಗಡಿಯ ಬಳಿ ಬಂದಿಳಿದ. ದರದರನೆ ಎಂಟ್ರಿ ಕೊಟ್ಟವ ಸೀದಾ ಸಿಬ್ಬಂದಿ ಬಳಿ ಬಂದ. "ಟೋಕನ್ ತಗೊಳಿ ಸರ್ ನಾವೆ ಕರಿತೀವಿ" ಅಂದು ವಿನಯವಾಗಿ ಗುಂಡನ ಬಳಿ ವಿನಂತಿಸಿಕೊಂಡರು. ಗುಂಡನ ದರ್ಪ ಕೊಂಚ ಇಳಿಯಿತು ಜೊತೆಗೆ ಮುಜುಗರವೂ ಆಯಿತು. ಸರಿ, ತನ್ನ ಸರದಿ ಬಂದಾಗ, ಮೊಬೈಲ್ ಸೇವೆಯನ್ನು ಪ್ರೀಪೈಡ್-ಗೆ ವರ್ಗಾಯಿಸಲು ವಿನಂತಿಸಿಕೊಂಡನು. ಸಿಬ್ಬಂದಿಯವರು ಯಾವುದೇ ತಡವಿಲ್ಲದೆ, ಎಲ್ಲಾ ಡಾಕ್ಯುಮೆಂಟುಗಳನ್ನು ಪರಿಶೀಲಿಸಿ, ಉಳಿದಿರುವ ಬಿಲ್ಲನ್ನು ಕಟ್ಟಲು ಹೇಳಿದರು. ಗುಂಡ ಬಿಲ್ಲನ್ನು ಕಟ್ಟಿದ ನಂತರ ಯಾವುದೇ ಆಕ್ಷೇಪಣೆ ಅಥವಾ ಪ್ರಶ್ನೆಗಳಿಲ್ಲದೆ ಅವನ ವರ್ಗಾವಣೆ ಬೇಡಿಕೆಯನ್ನು ಒಪ್ಪಿದರು. ಜೊತೆಗೆ ಹೊಸ ಸಿಮ್ ಅನ್ನು ಕೊಟ್ಟು ಇನ್ನೆರಡು ದಿನದಲ್ಲಿ ಆಕ್ಟಿವೇಟ್ ಆಗುವುದೆಂಬ ಭರವಸೆಯನ್ನಿತ್ತರು.ಯಾವುದೇ ಅಡೆತಡೆಯಿಲ್ಲದೆ ಕೆಲಸ ಆಗಿದ್ದನ್ನು ಕಂಡು ಗುಂಡನಿಗೆ ಹರುಷದ ಜೊತೆಗೆ ದುಃಖವೂ ಆಯಿತು. ತನ್ನ ಪ್ರಿಪರೇಷನ್ ಎಲ್ಲಾ ವ್ಯರ್ಥವಾಯಿತಲ್ಲ ಎನ್ನುವುದು ಅವನ ರೋದನೆ.

ಎರಡು ದಿನ ಕಳೆದಂತೆ ಹಳೆಯ ಸಿಮ್ ಕೆಲಸ ಮಾಡುವುದನ್ನು ನಿಲ್ಲಿಸಿತು. ಹಾಗೆಯೇ ಅವನ ಮಡದಿಯ ಮೊಬೈಲ್ಲಿಗೆ ಇವನ ಹೊಸ ಸಿಮ್ ಆಕ್ಟಿವೇಟ್ ಆಗಿದೆಯೆಂಬ ಚುಟುಕು ಸಂದೇಶ ಕೂಡ ಬಂದಿತು. ಇವನ ಸಂತೋಷ ಮುಗಿಲು ಮುಟ್ಟಿತು. ಅವಸರದಲ್ಲಿ ಮೊಬೈಲಿನ ಹಿಂಬದಿಯನ್ನು ತೆರೆದು, ಹಳೆ ಸಿಮ್ಮನ್ನು ಕಿತ್ತು, ಹೊಸದನ್ನು ಜೋಡಿಸಿ, ಮತ್ತೆ ಕವರನ್ನು ಮುಚ್ಚಿದನು. ಅರೆ, ಮೊಬೈಲ್ ಸ್ವಿಚ್ ಆನ್ ಆಗುತ್ತಿಲ್ಲ! ಏನಾಶ್ಚರ್ಯ, ಎಷ್ಟು ಬಾರಿ ಪವರ್ ಬಟನ್ ಅಮುಕಿದರೂ ಮೊಬೈಲ್ಲಿನ ಮಾತೆ ಹೊರಡುತ್ತಿಲ್ಲ. "ಅಯ್ಯಯ್ಯೋ ದೇವರೆ. ಬರಿ ಪ್ರೀಪೈಡ್ ಮಾಡಲು ಹೇಳಿದಕ್ಕೆ, ಮೊಬೈಲನ್ನೇ ಬಲಿ ತೆಗೆದುಕೊಂಡರಲ್ಲಪ್ಪ. ಥೂ ದರಿದ್ರ ಕಂಪನಿಗಳು, ದರಿದ್ರ ಸರಕಾರಗಳು, ಎಲ್ಲರೂ ಜನವಿರೋಧಿಗಳೇ. ಸುಮ್ಮನೆ ದುಡ್ಡು ಉಳಿಸಲು ಹೋಗಿ ಮೊಬೈಲನ್ನೇ ಹಾಳುಮಾಡಿದರಲ್ಲಪ್ಪ. ಈ ಸಿಮ್ಮಿನಲ್ಲಿ ಏನಾದರೂ ವೈರಸ್ ಇಟ್ಟಿರಬೇಕು. ಒಹೋ ಅದಕ್ಕೆ ಅಂದು ಸಿಬ್ಬಂದಿಗಳು ಸುಮ್ಮನೆ ಇದ್ದಿದ್ದು. ಹೊಸ ಸಿಮ್ ಹಾಕಿದ ಮೇಲೆ ನಮ್ಮ ಆಟ ತಿಳಿಯುತ್ತದೆ ಎನ್ನುವ ದುರಾಲೋಚನೆ ಇರಬೇಕು. ಇರಲಿ ಮತ್ತೆ ನನ್ನ ಕೈಗೆ ಸಿಗಲ್ವಾ ಎಲ್ಲಿಗೆ ಹೋಗ್ತಾರೆ. ತಾಳಿ ಮಕ್ಳಾ ಬುದ್ಧಿ ಕಲಿಸ್ತೀನಿ" ಎಂದು ಒಂದೇ ಸಮನೆ ಕಿರುಚಾಡಲು ಪ್ರಾರಂಭಿಸಿದನು. ಕಸ್ಟಮರ್ ಕೇರ್ ನಂಬರಿಗೆ ಮಡದಿ ಮೊಬೈಲಿನಿಂದ ಫೋನಾಯಿಸಿ ಹಿಗ್ಗಾ ಮುಗ್ಗಾ ವಾಗ್ಬಾಣದಿಂದ ಥಳಿಸಿದನು. "ಇಲ್ಲಾ ಸಾರ್ ಹಾಗೆಲ್ಲ ಆಗೊಲ್ಲಾ. ನಿಮ್ಮ ಫೋನ್ ಕೆಟ್ಟಿರಬೇಕು" ಎಂದಿದ್ದೆ ತಡ ಗುಂಡನ ಸಿಟ್ಟು ನೆತ್ತಿಗೇರಿತು. "ನಿಮ್ಮ ತಲೆ ಕೆಟ್ಟಿದೆ. ಇಂತಹ ಜಾಲಗಳನ್ನು ಬೀಸಿ ಜನರಿಗೆ ಮೋಸ ಮಾಡೋ ತಂತ್ರಜ್ಞಾನ ಯಾವಾಗ ಶುರು ಮಾಡಿದ್ರಿ. ಅಲ್ಲಾ ಪ್ರೀಪೈಡ್ ಸೇವೆಗೆ ವರ್ಗಾಯಿಸಲು ಆಗಲ್ಲ ಅನ್ನೋಬದ್ಲು ಈತರ ಸೇಡು ತಿರಿಸಿಕೊಳ್ತೀರಾ? ನಿಮ್ಮಂತವರಿಂದನೆ ನಮ್ಮ ದೇಶ ಹೀಗೆ ಅಧಪತನಕ್ಕೆ ಇಳಿದಿರೋದು. ನನಗೆ ನಿಮ್ಮ ನೆಟ್ವರ್ಕ್ ಬೇಡವೇ ಬೇಡ. ನಾನು ಬೇರೆ ನೆಟ್ವರ್ಕ್ ಕಡೆಗೆ ಪೋರ್ಟ್ ಮಾಡುತ್ತೇನೆ" ಅನ್ನುವಷ್ಟರಲ್ಲಿ, ಕಾಲ್ ಕಟ್ಟಾಯಿತು. "ಓಹೋ। ಇದು ಕಣಪ್ಪಾ ಎಸ್ಕೇಪಿಸಮ್ ಅನ್ನೋದು. ತಪ್ಪು ಬೇರೆ ಮಾಡೋದು ಮತ್ತು ಅದ್ರಿಂದ ತಪ್ಪಿಸಿಕೊಳ್ಳೋದು" ಹೀಗೆ ಗುಂಡನ ರಂಪಾಟ ಮುಂದುವರೆದಿತ್ತು.

ಸುಮಾರು ಹೊತ್ತಾದರೂ ಇವರ ಗೋಳಾಟ ಕಡಿಮೆಯಾಗದ ಕಾರಣ, ಮಡದಿ ಅವನನ್ನು ಸಮಾಧಾನಪಡಿಸಲು ಬಂದಳು. "ಅಲ್ರೀ ಆತರ ಆಗ್ಲಿಕ್ಕೆ ಸಾಧ್ಯನೇ ಇಲ್ಲ. ಕೊಡಿ ಒಮ್ಮೆ ಮೊಬೈಲನ್ನು" ಎಂದು ಪರೀಕ್ಷಿಸಲು ಪ್ರಾರಂಭಿಸಿದಳು. "ಅಲ್ರಿ ನಿಮ್ಮ ಮೊಬೈಲ್ ಯಾಕೆ ಇಷ್ಟೋಂದು ಸ್ಲಿಮ್ ತರ ಅನ್ನಿಸ್ತಾ ಇದೆ" ಎಂದು ಅನುಮಾನದಿಂದ ನೋಡಿದಳು. "ಇರಲಿ ಸಿಮ್ ಡ್ಯಾಮೇಜ್ ಆಗಿದಿಯಾ ನೋಡ್ತಿನಿ" ಎಂದು ಮೊಬೈಲ್ ಹಿಂದಿನ ದ್ವಾರವನ್ನು ತೆರೆದಳು. "ರೀ ಏನ್ರಿ ಇದು. ಬ್ಯಾಟರಿನೇ ಹಾಕಿಲ್ಲ. ಇನ್ನೇನು ಅದಿಕ್ಕೆ ಪವರ್ ದೇವ್ರು ಕೊಡ್ತಾನಾ. ಸುಮ್ನೆ ಇರೋಬರೋರಿಗೆ ಬಿಟ್ಟಿ ಬೈದುಬಿಟ್ರಲ್ಲ. ಅಯ್ಯೋ ಯಾರೊ ಬಡಪಾಯಿದು ದಿನಾನೇ ಸರಿ ಇಲ್ಲ ಅನ್ಸುತ್ತೆ" ಛೇ ಅನ್ನುತ್ತಾ ಮಡದಿ ಮೊಬೈಲ್ ಬ್ಯಾಟರಿಯನ್ನು ಸೇರಿಸಿದಳು.

ಮೊಬೈಲ್ ಕೂಡ ಆನ್ ಆಯ್ತು. ನೆಟ್ವರ್ಕ್ ಕೂಡ ಬಂತು. ಎಲ್ಲವೂ ಸರಿಯಾಗಿತ್ತು. ಅವಸರದಲ್ಲಿ ಸುಮಾರು ೬೦ ನಿಮಿಷ ಅವಾಂತರವೇ ಸೃಷ್ಟಿಸಿದ್ದ ಗುಂಡ. ತನ್ನ ಮೂರ್ಖತನಕ್ಕೆ ತಾನೆ ಮುಜುಗರಗೊಂಡ. ಇಷ್ಟು ಹೊತ್ತು ನಡೆದ ಸಮರವನ್ನು ನೆನೆಸಿಕೊಂಡಾಗ ಬಹಳ ನಾಚಿಕೆಯಾಯಿತು ಅವನಿಗೆ. ಹಾಗೆ ಪೆಚ್ಚುಮೋರೆ ಹಾಕಿಕೊಂಡು ಸುಮ್ಮನೆ ತನ್ನ ರೂಮಿನೆಡೆಗೆ ನಡೆದ ಇತ್ತ ಅವನ ಮಡದಿಗೆ ನಗು ತಡೆಯಲಾಗದೆ ಅಡುಗೆ ಮನೆ ಸೇರಿಕೊಂಡಳು.

No comments:

Post a Comment

Printfriendly

Related Posts Plugin for WordPress, Blogger...