Sunday, July 28, 2019

ಬ್ಯಾಕೆಂಡ್ - ೨೩

"
ನಾನು ನನ್ನ ಬೆನ್ನನ್ನೇ ನೋಡಿಲ್ಲ,
ಬೆನ್ನ ಹಿಂದೆ ಮಾತನಾಡುವವರನ್ನು ಯಾಕೆ ನೋಡಲಿ
"

ವೀಕೆಂಡ್ ಬಂದರೆ ಸಾಕು ಅಮೃತನಗರದ ಅಮೃತಹಳ್ಳಿ ಮುಖ್ಯರಸ್ತೆಯಲ್ಲಿ ವಾಹನಗಳ ಸರತಿ ಸಾಲು. ಯಾಕೆಂದ್ರೆ ಮಕ್ಕಳನ್ನು ಕರಾಟೆ ತರಬೇತಿಗೆ ಕರೆತರುವ ಪೋಷಕರಿಂದಾಗಿ. ತರಬೇತಿ ಮುಗಿಯುವವರೆಗೆ ಅಲ್ಲೇ ಕ್ಯಾಂಪ್. ಕೆಲವರು ಕಾರಿನಲ್ಲೇ ಮೊಬೈಲ್ ನೋಡುತ್ತಿರುತ್ತಾರೆ, ಮತ್ತೆ ಕೆಲವರು ಹರಟೆ ಹೊಡೆಯುತ್ತಿರುತ್ತಾರೆ, ಉಳಿದವರು ಮಕ್ಕಳ ತರಬೇತಿಯನ್ನು ವೀಕ್ಷಿಸುತ್ತಿರುತ್ತಾರೆ. ರಸ್ತೆಯೇ ಇಲ್ಲದ ಮುಖ್ಯರಸ್ತೆಯಲ್ಲಿ ಇವರ ಪಾರ್ಕಿಂಗ್ ಕಾಟ ಬೇರೆ. ಅಮೃತಹಳ್ಳಿ ಮುಖ್ಯ ರಸ್ತೆ ಡಾಮರು ಕಾಣದೆ ಸುಮಾರು ೨ ವರ್ಷ ಆಗಿರಬೇಕು. ಗಾಯದ ಮೇಲೆ ಬರೆ ಎಂಬಂತೆ ಮೊನ್ನೆ ನೀರು ಸರಬರಾಜಿನವರು ಪೈಪ್ ಅಳವಡಿಸಲು ದೊಡ್ಡ ಕಂದಕವನ್ನೇ ತೆರೆದಿದ್ದಾರೆ. ಇರುವ ಅಲ್ಪ-ಸ್ವಲ್ಪ ರಸ್ತೆಯನ್ನು ಕೂಡಾ ಮಣ್ಣುಪಾಲು ಮಾಡಿದ್ದಾರೆ ಮಹಾನುಭಾವರು. ಸ್ವಲ್ಪ ಭಾಗದಲ್ಲಿ ೩ ದಿನದ ಹಿಂದೆ ಡಾಮರು ಹಾಕಿದ್ದರು. ಇನ್ನೇನು ಉಳಿದ ಭಾಗಗಳಿಗೂ ಜೀವ ಬರುತ್ತೆ ಅಂತಾ ಅಂದುಕೊಂಡುವಷ್ಟರಲ್ಲಿ ಜಲಮಂಡಳಿಯವರು ಹೊಸತನ್ನೂ ನೀರುಪಾಲು ಮಾಡಿದ್ದಾರೆ. ಹೊಸ ರಸ್ತೆ ಉಳಿದದ್ದು ೩ ದಿನ ಮಾತ್ರ, ಜನಗಳ ಟ್ಯಾಕ್ಸ್ ಕೂಡಾ ಮಣ್ಣುಪಾಲಾಯಿತು. ಪ್ರಮಾಣವಚನ ಸ್ವೀಕರಿಸಿ ಬಹುಮತವಿಲ್ಲದೆ ಎರಡೇ ದಿನದಲ್ಲಿ ರಾಜೀನಾಮೆ ಕೊಟ್ಟಂತ ಮುಖ್ಯಮಂತ್ರಿಯತ್ತಿತ್ತು ಈ ಹೊಸ ರಸ್ತೆಯ ಸ್ಥಿತಿ. ಇಷ್ಟು ಬೇಗ ತನ್ನ ತಿಥಿ ಮಾಡುತ್ತಾರೆ ಅನ್ನೋದು ಈ ರಸ್ತೆ ಊಹೆಯೂ‌ ಮಾಡಿರಲಿಕ್ಕಿಲ್ಲ. ಇದನ್ನು ಸರಿಪಡಿಸಲು ಇನ್ನೆಷ್ಟು ವರ್ಷ ,ಅಲ್ಲಲ್ಲಾ ಯುಗಗಳು ಬೇಕಾಗಬಹುದೋ! ಅಷ್ಟಲ್ಲದೇ ಅನಿಯಂತ್ರಿತ ಅಗೆತದಿಂದ ದಿವಸ ಅನೇಕ ವಾಹನಗಳು ಅಪಘಾತಕ್ಕೀಡಾದರೆ, ಪಾದಚಾರಿಗಳು ಜಾರಿ ಬೀಳುತ್ತಿದ್ದಾರೆ. 'ಅಮೃತ'ನಗರದ ಅಮೃತಹಳ್ಳಿ ಮುಖ್ಯ ರಸ್ತೆ ಸಧ್ಯ ನಾಗರಿಕರಿಗೆ 'ವಿಷ'ಕಾರಿಯಾಗಿ ಪರಿಣಮಿಸುತ್ತಿದೆ. ದುರಾಸೆ ರಾಜಕಾರಣಿಗಳಿಗೆ ತಿಳಿಯುವುದಾದರೂ ಏನು? ದ್ವಿಚಕ್ರ ವಾಹನದವರಿಗೆ ಸ್ಕಿಡ್ ಜೊತೆಗೆ ಕಂದಕಕ್ಕೆ ಹಾರುವ ಭಾಗ್ಯ ಕೂಡಾ. ನೀವೇನಾದರು ಡರ್ಟ್ ಟ್ರ್ಯಾಕ್ ರೇಸ್ ಗೆ ತರಬೇತಿ ಪಡೆಯುತ್ತಿದ್ದರೆ ತಕ್ಷಣ ನಿಲ್ಲಿಸಿ. ಮಳೆ ಬಂದರೆ ಇಲ್ಲಿನ ರಸ್ತೆಯಲ್ಲಿಯೇ ಪ್ರಾಕ್ಟೀಸ್ ಮಾಡಬಹುದು ಉಚಿತವಾಗಿ ಕೂಡಾ!

ರಸ್ತೆಯೇ ಇಲ್ಲದ ಅಮೃತನಗರದ ಅಮೃತಹಳ್ಳಿ  ಮುಖ್ಯ ರಸ್ತೆ
ವಿಷಯ ಅದಲ್ಲ ಬಿಡಿ :-). ಪ್ರತಿ ವೀಕೆಂಡ್ ವ್ಯಾಯಾಮಕ್ಕೆಂದು ಪಾರ್ಕ್ ಕಡೆ ನಡೆಯುವಾಗ ಇಂತಹ ಸೋಜಿಗಗಳು ಕಣ್ಣಿಗೆ ಬೀಳುತ್ತದೆ. ಆದರೆ ನಾನು ಮೊಬೈಲ್ ಮನೆಯಲ್ಲೇ ಬಿಡುವುದರಿಂದ ಹಲವು ಬಾರಿ ಅದನ್ನು ಚಿತ್ರಿಕರಿಸುವ ಅವಕಾಶ ಕೈ ತಪ್ಪಿ ಹೋಗುತ್ತದೆ. ಆದರೆ ಈ ಬಾರಿ ಮನೆಗೆ ತೆರಳಿ ಮೊಬೈಲ್ ತಂದು ಬ್ಯಾಕೆಂಡ್ ಕ್ಲಿಕ್ಕಿಸಿದೆನು. ಬಹಳ ಉತ್ತಮ ಮಾತನ್ನು ಬರೆದಿದ್ದಾರೆ. ಯಾರ್ಯಾರೋ ಏನು ಹೇಳಿದ್ರೂ ಅಂತಾ ನಾವ್ಯಾಕೆ ತಲೆ ಕೆಡಿಸಿಕೊಳ್ಳುವುದು. ಉದಾಹರಣೆಗೆ ತಗೊಳ್ಳಿ ಮದುವೆ ಮನೆ ಮಾತು. ಹೆಂಗಳೆಯರು ಎಲ್ಲರ ಮುಂದೆ ಸೀರೆಯನ್ನು ಹೊಗಳಬಹುದು ಅದೆ ಬ್ಯಾಕೆಂಡ್ ನಲ್ಲಿ ಅಂದರೆ ಬೆನ್ನ ಹಿಂದೆ "ಇದು ಒಂದು ಸೀರೆನಾ ಮದುವೆಗೆ ಹಾಕೊಳೊದು" ಅಂತಾ ಜರಿಯಬಹುದು. ಇಂತಹವರನ್ನು ಯಾವುದೇ‌ ಮುಲಾಜಿಲ್ಲದೇ ತಿರಸ್ಕರಿಸಬಹುದು. ಆದರೆ ಎಲ್ಲವೂ‌ ಹಾಗಲ್ಲ! ಉದಾಹರಣೆಗೆ ನಿಮ್ಮ ಕೊಲೀಗ್ ನಿಮ್ಮ ಬಗ್ಗೆ ಹಿಂಬದಿಯಲ್ಲಿ ಮ್ಯಾನೇಜರ್ ಗೆ ಚಾಡಿ ಹೇಳಬಹುದು. ಇದು ಬೆನ್ನ ಹಿಂದಿನ ಮಾತಾದರೂ ಕೊನೆಗೆ ಬೆನ್ನಿಗೆ ಚೂರಿ ಇಟ್ಟಂತೆ. ಇಂತಹವರ ಬಗ್ಗೆ ಜಾಗ್ರತೆ ಅತ್ಯಾವಶ್ಯಕ ಕೂಡಾ.



ಕಂಕ್ಲೂಶನ್ ಏನಪ್ಪಾ ಅಂದ್ರೆ ಬೆನ್ನ ಹಿಂದೆ ಮಾತನಾಡುವವರನ್ನು ಇಗ್ನೋರ್ ಮಾಡಿ ಆದರೆ ಬೆನ್ನ ಹಿಂದೆ ಮಾತನಾಡಿ ಚೂರಿ  ಇಡುವವರ ಬಗ್ಗೆ ಮಾತ್ರ ಜಾಗ್ರತೆ ಇರಲಿ!

No comments:

Post a Comment

Printfriendly

Related Posts Plugin for WordPress, Blogger...