Wednesday, April 14, 2021

ಏನಪ್ಪಾ ನಾವೆಲ್ಲಾ ಈಗ ಕಾಣಿಸೋದಿಲ್ವಾ!!?

೧೧ ಏಪ್ರಿಲ್ ೨೦೨೧

ಇಂದು ಬಹಳ ಸಂತೋಷದ ದಿನವಾಗಿತ್ತು. ಯಾಕೆಂದರೆ ಬಹಳಷ್ಟು ಹಕ್ಕಿಗಳು ನನ್ನ ಕ್ಯಾಮರಾ ಬಲೆಗೆ ಬಿದ್ದಿದ್ದವು. ಅದರ ಆಂಗ್ಲ ಬರಹ ಇಲ್ಲಿದೆ. ವಿಷಯ ಅದಲ್ಲ. ಅರ್ಧ ಕೆರೆ ದಾಟಿದ ಬಳಿಕ ಕೆಲವು ದೊಡ್ಡ ಮರಗಳಿವೆ. ಅದರಲ್ಲಿ ಒಂದು ಚಿಗುರಿಲ್ಲದ ಬೋಳು ಮರವು ಸೇರಿದೆ. ಹಕ್ಕಿಗಳಿಗೆ ಬಿಸಿಲು ಬೇಕಿನಿಸಿದಾಗ ಈ ಬೋಳು ಮರವೇ ಆಶ್ರಯ. ಗೋಪ್ಯತೆ ಬೇಕಾದಾಗ ಸಂಪದ್ಭರಿತ ಮರಗಳನ್ನು ಆಶ್ರಯಿಸುತ್ತವೆ. ಇರಲಿ ಬಿಡಿ. ಮುಂದುವರೆಸೋಣ.

ಅರ್ಧ ದಾರಿ ಬಂದೆನಾ, ಅಲ್ಲೇ ಸ್ವಲ್ಪ ಹೊತ್ತು ಕಣ್ಣು ಹಾಯಿಸಿದೆ.  ಯಾವ ಹಕ್ಕಿಯು ಕಾಣಲಿಲ್ಲ. ಅಷ್ಟರಲ್ಲಿ ಕುಯ್-ಕುಯ್ ಅಂತಾ ಗಿಣಿ ಶಬ್ದ ಮಾಡಿತು ನೋಡಿ. ನಾನು ಕೂಡಾ ತಲೆ ಎತ್ತಿ ನೋಡಿ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿದೆ. ಅದರ ಸಂಭಾಷಣೆ ಹೀಗಿತ್ತು ಅನ್ನಬಹುದು.


"ಏನಯ್ಯಾ, ತಲೆ ಮೇಲಕೆತ್ತು!  ಇಲ್ಲೇ ಇದೀನಿ ನೋಡು. ಶೆಕೆ ಬೇರೆ ಜಾಸ್ತಿ ಆಗಿದೆ. ಕೆರೆ ನೀರು ಬೇರೆ ಗಲೀಜು. ತುಂಬಾ ತುರಿಸ್ತಾ ಇದೆ. ಈ ಮೈ  ಕೊಳೆ ತೆಗಿಯೋ ಮಧ್ಯದಲ್ಲಿ ನಿನ್ನನ್ನು ಬೇರೆ ಕರಿಬೇಕು. ಏನು ತುಂಬಾ ಜನ ಹೊಸಬರು ಸಿಕ್ಕಿದ್ರಾ ಹೇಗೆ? ನಾವೆಲ್ಲ ಕಾಣೋದೇ ಇಲ್ಲ ಅನ್ಸುತ್ತೆ? ನೀವು ಮನುಷ್ಯರೇ ಹಾಗೇ! ಹಳಬರು ಬೇಡ ಎಲ್ಲಾ ಹೊಸತು ಬೇಕು. ನಮ್ಮ ಫೋಟೋ ಚೆನ್ನಾಗಿ ಬಂದಮೇಲೆ ನಾವೆಲ್ಲಾ ಹಳಬರಾಗಿ ನಿಮ್ಮ ಕ್ಯಾಮರಾದಲ್ಲಿ ಜಾಗನೇ ಇರಲ್ಲ ಅಲ್ವಾ? ಇರಲಿ ಬಿಡು. ನಾವು ಬದುಕೋದು ದೇವರು ಹುಟ್ಟಿಸಿದೋಸ್ಕರ ವಿನಹಾ ನಿಮ್ಮ ಫೋಟೋ ಪ್ರದರ್ಶನಕ್ಕೆ ಅಲ್ಲಾ! ನಡಿ ನಡಿ ಮುಂದೆ ಹೋಗಿ ಕೆಲಸ ನೋಡು!"

ಸರಿ ಗಿಣಿಗೆ ಬೇಜಾರಾಗಬಾರದುಂತ ಸ್ವಲ್ಪ ಚಿತ್ರಗಳನ್ನು ಕ್ಲಿಕ್ಕಿಸಿದೆ. 






ಮತ್ತಷ್ಟು ಹಕ್ಕಿ ಸರಣಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ :  NKBirdSeries

No comments:

Post a Comment

Printfriendly

Related Posts Plugin for WordPress, Blogger...