Sunday, April 18, 2021

ಮನೆ ಅಂಗಳದ ತರಕಾರಿ

"ರೀ!! ತೋಟದಿಂದ ನಾಲ್ಕು ಬದನೆ ತನ್ನಿ ಪಲ್ಯ ಮಾಡಕ್ಕೆ. ಜೊತೆಗೆ ೧ ಸೌತೆಕಾಯಿ ತನ್ನಿ ಹುಳಿ ಮಾಡಲಿಕ್ಕೆ. ಹಾಗೆ ನಾಲ್ಕು ಎಳೆಮುರಿ ಸೊಪ್ಪು ತನ್ನಿ ತಂಬೂಳಿ ಮಾಡೋಕೆ". ಇದು ಕಾಲ್ಪನಿಕ ಜಗತ್ತಲ್ಲಾ ಮಾರಾಯ್ರೆ. ನಮ್ಮ ಮಾವನ ಮನೆಯಲ್ಲಿ ಸೊಂಪಾಗಿ ತರಕಾರಿ ಹಾಗೂ ಸೊಪ್ಪಿನ ಕೃಷಿ ಮಾಡಿದ್ದಾರೆ. ಏನೇನಿಲ್ಲ ಹೇಳಿ! ಮಂಗಳೂರು ಸೌತೆಕಾಯಿ, ಕರಾವಳಿ ಬದನೆಕಾಯಿ, ಕರಾವಳಿ ಬೆಂಡೆಕಾಯಿ, ಪಡುವಲಕಾಯಿ, ಅರಿವೆ ಸೊಪ್ಪು (ಹಸಿರು ಮತ್ತು ಕೆಂಪಿನದು), ಸಿಹಿಗೆಣಸು, ಟೋಮಾಟೋ, ಹಸಿಮೆಣಸು, ಬೂದುಗುಂಬಳಕಾಯಿ, ಸಿಹಿ ಕುಂಬಳಕಾಯಿ! ಸಾಕಲ್ಲವೇ ಇಷ್ಟು. ಎಲ್ಲಾ ಕೃಷಿಯನ್ನು ಯಾವುದೇ ಗೊಬ್ಬರವಿಲ್ಲದೇ ಸಾಧಿಸಿದ್ದು. ಹೌದು ಇಳುವರಿ ಕಡಿಮೆಯಾದರೂ ಮನೆಗೆ ಬೇಕಾಗುವಷ್ಟು ಬೆಳೆಯಬಹುದು. ಇಲ್ಲಿ ಲಾಭ-ನಷ್ಟದ ಲೆಕ್ಕವಿಲ್ಲ, ಬದಲಾಗಿ ಮನೆಯಲ್ಲಿ ಬೆಳೆದ ತರಕಾರಿ ಎಂಬ ಸಂತೃಪ್ತಿ ಇದೆ. ಇದೆಲ್ಲವೂ ಸುಲಭದ ಕೆಲಸ ಅಲ್ಲ.  ಬೆಳೆಯುವ ಮುನ್ನ ತೋಟವನ್ನು ಅವರೆ ಹದ ಮಾಡಿದ್ದು. ಎರಡು ದಿನಕ್ಕೊಮ್ಮೆ ಗಿಡಗಳಿಗೆ ನೀರುಣಿಸಬೇಕು, ಆಗಾಗ ಸಗಣಿ ಹಾಕಬೇಕು, ಹಸು ತಿನ್ನದಂತೆ ನೋಡಿಕೊಳ್ಳಬೇಕು ಕೂಡಾ. ಇಷ್ಟೆಲ್ಲಾ ಕಷ್ಟ ಪಟ್ಟ ನಂತರ ನಿಮಗೆ ಮನೆಯಲ್ಲೇ ಬೆಳೆದ ತರಕಾರಿ ತಿನ್ನುವ ಸೌಭಾಗ್ಯದ ಜೊತೆಗೆ ತೋಟದ ಕೆಲಸ ಮಾಡಿ ದೇಹದ ಸಧೃಡತೆ ಕೂಡಾ ಪ್ರಾಪ್ತವಾಗುವುದು. ಒಳ್ಳೇ ಫಸಲು ಬಂದಾಗ ಅಂಗಡಿಯಿಂದ ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ನಿಂಬೆ ಮಾತ್ರ ತಂದರೆ ಸಾಕು. ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ಕೂಡಾ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ ಕೂಡಾ! ಶ್ರಮ ಬಹಳಷ್ಟು ಇದ್ದರೂ ಕೊನೆಗೆ ಸಿಗುವ ಸಂತೃಪ್ತಿ ಬಣ್ಣಿಸಲಾಗದು. ಇಲ್ಲಿದೆ ನೋಡಿ ತೋಟದ ಚಿತ್ರಣ.

ಕರಾವಳಿಯ ಬದನೆ


ಹಸಿಮೆಣಸಿನಕಾಯಿ


ಕೆಂಪು ಅರಿವೆ ಸೊಪ್ಪು

ಟೋಮಾಟೋ

ಸಿಹಿಕುಂಬಳಕಾಯಿ

ಸಿಹಿ ಗೆಣಸು

ಪಡುವಲಕಾಯಿ

ಕರಾವಳಿ ಬೆಂಡೆಕಾಯಿ




ಸಂಪದ್ಭರಿತ ಟೋಮ್ಯಾಟೋ

ಕೊಯ್ಲಿಗೆ ಬಂದಾಗ ಮನೆಯ ಸಿಹಿ-ಗೆಣಸು ನಿಮ್ಮದಾಗಲಿದೆ. ಬೇಯಿಸಿ ಅಥವಾ ಹಪ್ಪಳ ತಯಾರಿಸಿ ಚಪ್ಪರಿಸಿ ತಿನ್ನಬಹುದು

ಹಸಿರು ಅರಿವೆ ಸೊಪ್ಪು


ಮಂಗಳೂರು ಸೌತೆಕಾಯಿ ಹಾಗೂ ಬೂದು ಕುಂಬಳಕಾಯಿಗಳ ಚಿತ್ರ ತೆಗೆಯಲು ಮರೆತುಹೋಯಿತು. ಮುಂದಿನ ಬಾರಿ ಊರಿಗೆ ಹೋದಾಗ ತೆಗೆಯುತ್ತೇನೆ. ಬಹುಶಃ ಮಳೆಗಾಲದ ಬಳಿಕ.

No comments:

Post a Comment

Printfriendly

Related Posts Plugin for WordPress, Blogger...