Thursday, April 15, 2021

ನಾವು ಯಾವಾಗಲೂ ಕದಿಯೋರಲ್ಲಾ. ತಿಳ್ಕೋ!

೧೩ ಏಪ್ರಿಲ್ ೨೦೨೧

ನಮಗೆಲ್ಲಾ ತಿಳಿದಂತೆ ಕಾಜಾಣ ಹಕ್ಕಿ(drongo) ಅನ್ಯ ಹಕ್ಕಿಗಳನ್ನು ಧ್ವನಿಯನ್ನು ಅನುಕರಿಸಬಲ್ಲದು. ಅದರಲ್ಲೂ ಬೇರೆ ಹಕ್ಕಿಗಳನ್ನು ಓಡಿಸಿ ಅವುಗಳ ಆಹಾರವನ್ನು ಕದಿಯಲು ಶಿಕ್ರಾ(shikra) ಹಕ್ಕಿಯ ಧ್ವನಿಯನ್ನು ನಕಲು ಮಾಡವುದು ತಿಳಿದೇ ಇರುವ ವಿಷಯ. ಅಮೃತಹಳ್ಳಿ ಕೆರೆಯಲ್ಲೂ ಕಾಜಾಣಗಳಿವೆ (black-drongo). ಇವುಗಳು ತುಂಬಾ ಗಂಭೀರ ಮುಖದಿಂದ ಮರದ ಮೇಲೆ ಕುಳಿತು ಬೇಟೆಗೆ ಹೊಂಚು ಹಾಕುತ್ತಿರುತ್ತವೆ. ಮನುಷ್ಯರನ್ನು ಕಂಡರೆ ಹೆದರಿಕೆ ಕೂಡಾ ಕಡಿಮೆ. ಅದರಿಂದ ಬಹಳ ಹತ್ತಿರದಿಂದ ನನಗೆ ಇದರ ಸುಂದರ ಚಿತ್ರಣವನ್ನು ಕ್ಲಿಕ್ಕಿಸಲು ಸಾಧ್ಯವಾಗಿದೆ.


ಇಂದು ಕೂಡ ಯುಗಾದಿ ದಿನ ಕೆರೆಯ ನಡಿಗೆ ಮುಗಿಸುತ್ತಿದ್ದಾಗ ಮತ್ತೆ ಕಾಜಾಣ ಹಕ್ಕಿ ಕಾಣಿಸಿತು. ನಾನು ಅದರ ಹತ್ತಿರ ತಲುಪಿದ ತಕ್ಷಣವೇ ಅದು ಹಾರಿ ಅಲ್ಲೇ ಇದ್ದ ಚಿಟ್ಟೆಯನ್ನು ಹಿಡಿದು ತಿನ್ನತೊಡಗಿತು. ಸ್ವಲ್ಪ ಸಮಯದ ಬಳಿಕ ತಿಂದು ಮುಗಿಸಿ ಹಾಗೆ ಕಣ್ಣು ಹಾಯಿಸುತ್ತಿತ್ತು. ಅದರ ಕಾಲ್ಪನಿಕ ಬರಹ ಇಲ್ಲಿದೆ.


"ಏನಪ್ಪಾ ಮತ್ತೆ ಖದೀಮರು ಅಂತಾ ಬ್ಲಾಗ್ ಬರೀತಿಯ? ಈಗ ತಾನೇ ನೋಡಿಲ್ವಾ ಬೇಟೆ ಆಡೋದು? ನಮಗೂ ಬೇಟೆ ಆಡೋಕೆ ಬರುತ್ತೆ. ಸುಮ್ಮನ್ನೆ ನಮ್ಮ ಬಗ್ಗೆ ಅಪಪ್ರಚಾರ ಮಾಡಬೇಡ. ಬೇಕಾದರೆ ಚಂದದ ಫೋಟೋ ಹೊಡಿ. ಹೇಗೂ ಹತ್ರ ಬಂದಿದ್ದೀನಿ. ಏನೋ ಕೆಲವೊಮ್ಮೆ ತಿನ್ನಕ್ಕೆ ಸಿಗದೇ ಇದ್ದಾಗ ದೊಡ್ಡ ಹಕ್ಕಿಗಳ ತರ ಶಬ್ದ ಮಾಡ್ತೀವಿ. ಹಾಗಂತ ಕದಿಯೋದೆ ನಮ್ಮ ಕೆಲಸ ಅಲ್ಲ ಗೊತ್ತಾಯ್ತ!"

ಸ್ವಲ್ಪ ಸಮಯದ ಬಳಿಕ ಹಕ್ಕಿ ತಿರುಗಿ ಕುಳಿತು ನನ್ನನ್ನೇ ನೋಡುತ್ತಿತ್ತು. 

"ಏನಯ್ಯ ಇನ್ನು ನಂಬಿಕೆ ಬಂದಿಲ್ವ. ನೋಡು ಸರಿಯಾಗಿ ನೋಡು. ಇದು ನಾನೇ ಗೊತ್ತಾಯ್ತ! ನಮ್ಮ ಮುಂದಿನ ಫೋಟೋ ಹೊಡಿದು ಎಲ್ಲಾರಿಗೂ ತೋರಿಸು ನಾವು ಕೂಡಾ ಬೇಟೆ ಆಡ್ತೀವಿ ಅಂತಾ! ಸುಮ್ಮನೆ ಹೊಸ ವರ್ಷದ ದಿನ ಸುಳ್ಳು ಪ್ರಚಾರ ಮಾಡಬೇಡ"


ಮತ್ತಷ್ಟು ಚಿತ್ರಗಳನ್ನು ಕ್ಲಿಕ್ಕಿಸಿ ಮನೆಗೆ ನಡೆದೆ. ಯಾಕೋ "ನಾವು ಕೂಡಾ ಬೇಟೆ ಆಡ್ತೀವಿ" ಅಂತಾ ತೋರಿಸಿಲಿಕ್ಕೆ ಕಾಜಾಣ ನನ್ನ ಬರುವಿಕೆಗೆ ಕಾಯುತ್ತಿತ್ತು ಅನ್ನೋ ತರ ಭಾಸವಾಗುತ್ತಿತ್ತು :-).  ನನಗು ಈ ಬಾರಿ ಕಾಜಾಣದ ಚಿತ್ರ ಬಹಳಷ್ಟು ಮುದ ನೀಡಿದೆ. ಏಕೆಂದರೆ ಅದರ ಮೈಮೇಲಿನ ಹೊಳಪು ಸ್ಪಷ್ಟವಾಗಿ ಗೋಚರಿಸುತ್ತಿದೆ :-)

ಮತ್ತಷ್ಟು ಹಕ್ಕಿ ಸರಣಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ :  NKBirdSeries

No comments:

Post a Comment

Printfriendly

Related Posts Plugin for WordPress, Blogger...