15 Oct 2024,
ಬೆಂಗಳೂರಿನಲ್ಲಿ ಜೋರು ಮಳೆ. ಎಂಥಾ ಮಳೆ ಅಂತೀರಾ! ಕರಾವಳಿಯಲ್ಲಿ ಕಂಡ ಮಳೆ ಬೆಂಗಳೂರಿನಲ್ಲಿ ಕಂಡೆನು. ಬೆಂಗಳೂರಿನಲ್ಲಿ ಹೆಚ್ಚಾಗಿ ಸಂಜೆ ಹೊತ್ತಿನಲ್ಲಿ ಜೋರು ಮಳೆ ಬರುವುದುಂಟು. ಆದರೆ ಇಂದು ದಿನಪೂರ್ತಿ ಜೋರು ಮಳೆ ಸುರಿಯಿತು. ಹಲವು ಕಡೆ ಸುಮಾರು 100 ಮೀ. ಮೀ ವರೆಗೂ ಸುರಿಯಿತು ಎಂದರೆ ನಗರದ ಪರಿಸ್ಥಿತಿ ಹೇಗಾಗಬೇಡ. ಹಲವು ಸ್ಕೂಲ್ ಬಸ್ಸುಗಳು ನೀರಿನ ಮಧ್ಯೆ ಸಿಕ್ಕಿಹಾಕಿಕೊಂಡಿವೆ. ಅಪಾರ್ಟ್-ಮೆಂಟುಗಳು ನೀರಿನಿಂದ ಆವರಿಸಿದೆ. ಟ್ಯಾಕ್ಸ್ ಕಟ್ಟುವವರ ಪರಿಸ್ಥಿತಿ ನೋಡಿ. ರಾಜಕಾರಣಿಗಳ ಭ್ರಷ್ಟಾಚಾರ ಇಳಿಸಲು ಆ ಕೃಷ್ಣನೇ ಮತ್ತೆ ಅವತರಿಸಬೇಕು !
ಇರಲಿ, ನನ್ನ ಮಕ್ಕಳಿಗೂ ಬೇಗನೆ ಶಾಲೆ ಬಿಟ್ಟಿದರು . ಮೈನ್ ರೋಡ್ ಪೂರ್ತಿ ನೀರು ತುಂಬಿಕೊಂಡಿಟ್ಟಂತೆ. ಈ ಬೆಂಗಳೂರಿನ ಶಾಲೆಗಳೂ ಬಹು ವಿಚಿತ್ರ. ಮಕ್ಕಳು ಖುಷಿ ಪಡಲಿ ಎಂದು ರಜೆ ಸಿಕ್ಕರೆ, ಅವರುಗಳು ಬೇಡದೆ ಇರುವ ಪ್ರಾಜೆಕ್ಟ್, ಸ್ಪರ್ಧೆಗಳು, ಅಸೈನ್ಮೆಂಟ್ ಅಂತಾ ತಲೆ ತಿನ್ನುತ್ತಾರೆ. ಅದು ಕೂಡಾ ಬೇಗನೇ ಆಗಬೇಕಂತೆ. ಚಿಕ್ಕ-ಮಕ್ಕಳಿಗೆ ಹೇಗೆ ತಿಳಿಯುತ್ತದೆ? ಸಾಲು ಸಾಲು ಬೇಡದೆ ಇರುವ ಪ್ರಾಜೆಕ್ಟ್ ಅಂಟಾ ಕೊಟ್ಟರೆ ಮನೆಯಲ್ಲಿ ಎಲ್ಲರಿಗೂ stress. ಆಡುವ ಮಕ್ಕಳಿಗೆ ಈಗಲೇ ಭಾರ ಹೋರುತ್ತಾರೆ ಶಾಲೆಗಳು. ಊರಿನ ಶಾಲೆಗಳು ಇಷ್ಟೊಂದು ಭಾರ ಹೇರುವುದಿಲ್ಲ. ಹೆಸರಿಗೆ ಮಾತ್ರ ಮಕ್ಕಳ ಸರ್ವತೋಮುಖ ಅಭಿವೃದ್ಧಿ. ಕೊನೆಗೆ ಮನೆಯಲ್ಲಿ ಸರ್ವರಿಗೂ ಕೋಪ ವೃದ್ಧಿ. ಕಡೆಗೆ ಹೆತ್ತವರು ಒದ್ದಾಡಬೇಕು. ಶಾಲೆಗೆ ಮಕ್ಕಳ ಹೋಗಬೇಕೋ ಅಥವಾ ಹೆತ್ತವರು ಹೋಗಬೇಕೋ ತಿಳಿಯುವುದಿಲ್ಲ. ಬೆಂಗಳೂರಿನ ಶಾಲೆಗಳಿಗೆ ಮಾತ್ರ ಈ ವಿಚಿತ್ರ ಶೋಕಿಗಳು! ಮಳೆ ವಿಷಯದಲ್ಲೂ ಹಾಗೆಯೇ, ಎಲ್ಲಾ ಕೈತಪ್ಪಿದ ಮೇಲೆ ಮಕ್ಕಳನ್ನು ಮನೆಗೆ ಹೋಗಲು ಬಿಡುತ್ತಾರೆ. ನಾವೇನು ಈಜಿಕೊಂಡು ಹೋಗಬೇಕೇ? ಅದಕ್ಕೆ ಸರಿಯಾಗಿ ರಿಕ್ಷದವರೂ ಸಿಗುವುದಿಲ್ಲ.
ಇವತ್ತೂ ಹಾಗೆಯೇ ಆಯಿತು. ನಾನು ಆಫೀಸ್ ಹೋಗಿದ್ದೆ. ಹೆಂಡತಿ ಕಷ್ಟಪಟ್ಟು ಆಟೋ ಬುಕ್ ಮಾಡಿದಳು. ವಾಪಸ್ ಬರುವಾಗಲೂ ಅದೇ ಆಟೋದಲ್ಲಿ ಸಂಚರಿಸಲು ಮನವಿ ಮಾಡಿಕೊಂಡಳು. ಅವನು ಕೂಡಾ ಒಪ್ಪಿಕೊಂಡ. ಶಾಲೆ ಹತ್ತಿರವಾಗುವಾಗಲೇ ರಸ್ತೆಯಲ್ಲಿ ಮೊಣಕಾಲಿನವರೆಗೂ ನೀರು ನಿಂತಿತ್ತು. ಹೇಗೋ ಕಷ್ಟಪಟ್ಟು ಶಾಲೆಗೆ ಸೇರಿಸಿದನು. "ಇನ್ನು ನನ್ನ ಕೈಲಿ ಆಗಲಮ್ಮ! ವಾಪಸ್ ಬರಲ್ಲ ನಾನು" ಅಂತ ಆಟೋ ಚಾಲಕ ಕೈ ಬಿಡುವುದೇ!? "ಇಲ್ಲ ಸಾರ್ ಕೆ. ಆರ್. ಪುರಂ ರೈಲ್ವೆ ನಿಲ್ದಾಣದಿಂದ ಹೋಗಬಹುದು. ನನ್ನ ಗಂಡ 2 ಸಲ ಬಂದಿದ್ದಾರೆ ಅದೇ ದಾರಿಯಲ್ಲಿ" ಎಂದು ಮನವಿ ಮಾಡಿಕೊಂಡರೂ ಆ ಪಾರ್ಟಿ ಕೇಳಲೇ ಇಲ್ಲ ಅಂತೆ. "ಇಲ್ಲಮ್ಮ ನಾನು ಇಲ್ಲಿ 30 ವರ್ಷದಿಂದ ಇದೀನಿ ನನಗೆ ಗೊತ್ತಿಲ್ವ! ವಾಪಸ್ ಹೋಗಲು ಒಂದೇ ದಾರಿ ಇರೋದು ಅದು ಬಂದಿರೋ ದಾರೀನೇ" ಎಂದು ಖಡಕ್ ಆಗಿ ಹೇಳಿದ್ದನು. ಜಾಸ್ತಿ ಕೊಡುತ್ತೇನೆ ಅಂದರೂ ಬಾರಲಿಲ್ಲವಂತೆ. ಕೊನೆಗೆ ಮಡದಿ ವಾಪಸ್ ಬರುತ್ತಾ ಬಸ್ಸನ್ನು ಅವಲಂಭಿಸಿದಳು. ಅವಳಿಗೂ ಮನೆಗೆ ಬಂದು ಸಾಕಾಗಿ ಹೋಯಿತು. ಬೆಂಗಳೂರಿನ ಆಟೋ ಸಹವಾಸವೇ ಸಾಕು
ವಾಪಸ್ ಬರಲು ಹಲವು ದಾರಿ ಇತ್ತು. ಆಟೋದವನಿಗೆ ತಿಳಿದಿತ್ತೋ ಇಲ್ವೋ ಗೊತ್ತಿಲ್ಲ. ಸುಮ್ಮನೆ ಅವಾಯ್ಡ್ ಮಾಡಲೂ ಹೇಳಿರಬಹುದು. ಅವನಿಗೆ ನಿಜವಾಗಿಯೂ ತಿಳಿದಿಲ್ಲವೆಂದರೆ ಅವನು 30 ವರ್ಷ ಇಲ್ಲಿ ವಾಸಿಸಿದ್ದೇ ವ್ಯರ್ಥ ಅನ್ನಿಸುತ್ತೆ! 1 ವರ್ಷ ಕೂಡಾ ಆಗಿಲ್ಲ ನಾನು ಬಂದು. ಮೊನ್ನೆ ತಾನೇ ಜೋರು ಮಳೆ ಬಂದಾಗ ವಾಪಸ್ ಬರುತ್ತಾ, ಕೆ. ಆರ್. ಪುರಂ ರೈಲ್ವೆ ನಿಲ್ದಾಣ ಹಾದಿಯಲ್ಲಿ ಬಂದಿದ್ದೇನು. ಇನ್ನೂ 1-2 ದಾರಿ ಇದೆ.
stubborn ಇದ್ದರೆ ಹೀಗೇಯೇ! ಆಟೋದವನಂತೆ ಒಂದೇ ದಾರಿಯಲ್ಲಿ ಇರಬೇಕು. ನೆರೆ ಎಂಬ ಕಷ್ಟ ಬಂದರೂ ಅನ್ಯ ದಾರಿ ಕಾಣಿಸುವುದಿಲ್ಲ. ಇದು ನನಗೂ ಪಾಠ ಕೂಡಾ. ಹಲವು ದಾರಿ ಇರುತ್ತದೆ. ಒಂದೋ ಬೇರೆಯವರನ್ನು ಕೇಳಬೇಕು ಇಲ್ಲಾ ಮೊದಲೇ ತಿಳಿದುಕೊಂಡಿರಬೇಕು. ಪ್ಲಾನ್-ಬಿ ಯಾವತ್ತೂ ಜೀವನದಲ್ಲಿ ಇದ್ದರೆ ನಮಗೆ ಒಳ್ಳೆಯದು. ಕಷ್ಟ ಕಾಲದಲ್ಲಿ ಬಹಳಷ್ಟು ಸಹಾಯ ಆಗುತ್ತದೆ.
No comments:
Post a Comment