Saturday, January 24, 2026

ಮುಂದಿನ ನಿಲ್ದಾಣ "GO SLOW" ತಾಣ !

ಆಫೀಸಿಗೆ ಬಸ್ಸಿನಲ್ಲಿ ಸಂಚರಿಸುವಾಗ ತೆಗೆದ ಚಿತ್ರ! ಹೇಗಿದೆ ನೋಡಿ ವಾಹನಗಳ ಮೆರವಣಿಗೆ. ಸುಮಾರು 15 ನಿಮಿಷ ಬಸ್ಸಿನಲ್ಲೇ ಮೌನವಾಗಿ ಇದನ್ನೆಲ್ಲಾ ವೀಕ್ಷಿಸುತ್ತಿದ್ದೆ. ಪುಣ್ಯಕ್ಕೆ ಪೀಕ್ ಸಮಯದಲ್ಲಿ ಸೀಟು ಸಿಕ್ಕಿತ್ತು. ಇಲ್ಲವೆಂದರೆ ಆ ತುಂಬಿದ bmtc ಬಸ್ಸಿನಲ್ಲಿ ನಿಲ್ಲುವುದು ಕಷ್ಟಸಾಧ್ಯ! ಆಚೆ ಈಚೆ ನೂಕುವುದು ಜೊತೆಗೆ ನಮ್ಮ ಸಾಮಾನುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು, ನಿರ್ವಾಹಕನಿಗೆ ಟಿಕೆಟ್ ನೀಡಲು ಜಾಗ ಬಿಡುವುದು. ಇದೆಲ್ಲದರ ಮಧ್ಯೆ ಜನ ಹೆಚ್ಚಾದಾಗ ಬಸ್ಸುಗಳು ಎಲ್ಲೋ ಒಂದುಕಡೆ ನಿಂತು ಟಿಕೆಟ್ ವಿತರಣೆ ಮಾಡಿದಾಗ ನಿಂತಿರಿರುವವರ ಪಾಡು ಹೇಳತೀರದು!


ದಿನಪೂರ್ತಿ ದುಡಿದು ಕಡೆಗೆ 50% ಹಣ ಟ್ಯಾಕ್ಸ್ ಸರಕಾರಕ್ಕೆ ಹೋಗುವುದು. Direct/Indirect Tax ಎಲ್ಲಾ ಸೇರಿಸಿ ಕೊನೆಗೆ ಕೇವಲ 6 ತಿಂಗಳ ದುಡಿಮೆ ನಮ್ಮ ಕೈ ಸೇರುತ್ತದೆ. ಹೆಸರಿಗೆ ಮಾತ್ರ IT ಉದ್ಯೋಗಿಗಳು. ರಜೆಯಲ್ಲೂ ಕೆಲಸ ಮಾಡುವ ಪರಿಸ್ಥಿತಿ. high-priority ಸಮಸ್ಯೆ ಬಂದರೆ ತಕ್ಷಣ ಲಾಗಿನ್ ಆಗುವುದು ಮಾಮೂಲಾಗಿದೆ. ಕೊನೆಗೆ ಕೆಲಸ ಹೋದರೆ ಸರಕಾರದ ಸವಲತ್ತೂ ಕೂಡಾ ಇಲ್ಲ, health-insurance ಕೂಡಾ ಇಲ್ಲ. ಯಾರಿಗೆ ಬೇಕು ಈ ಗೋಳು. ಒಟ್ಟಿನಲ್ಲಿ ಬೆಂಗಳೂರು ಒಂದು ಟ್ರಾಪ್! ಊರಿನಲ್ಲಿ ಕೆಲಸ ಇಲ್ಲ, ಇಲ್ಲಿ ಕೆಲಸ ಮಾಡಲು ಸಮಯವಿಲ್ಲ. ಕೊನೆಗೆ ದಿನಪೂರಿ ದುಡಿದು ಅರ್ಧದಷ್ಟು ಸರಕಾರಕ್ಕೆ ದಾನ. ಇಷ್ಟೆಲ್ಲಾ ದುಡ್ಡು ಕೊಟ್ಟರೂ ಭ್ರಷ್ಟಾಚಾರಕ್ಕೆ ಕೊನೆ ಮಾತ್ರ ಇಲ್ಲ! ಸರಕಾರ ಟ್ಯಾಕ್ಸ್ ಹಣವನ್ನು ಅಭಿವೃದ್ಧಿಗೆ ಇಟ್ಟರೆ ಕೊನೆಗೆ ಆಫೀಸರ್-ಗಳು ಕೋಟಿಗಟ್ಟಲೆ ಲೂಟಿ ಹೊಡೆಯುತ್ತಾರೆ. ಅವರಿಗೆಲ್ಲಾ ಎಳೇಳು ಜನುಮಕ್ಕೆ ಬೇಕಾಗುವಷ್ಟು ಉಚಿತ ಹಣ!

ಯಾಕೋ ಬಸ್ಸಿನಲ್ಲಿ ಸಂಚರಿಸುವಾಗ ಹಲವು ಯೋಚನೆಗಳು ಪ್ರವಾಹದಂತೆ ಹೊಡೆದವು. ಊರಿನಲ್ಲಿ ಕೆಲಸ ಮಾಡೋಣವೆಂದರೆ ರಾಜಕಾರಣಿಗಳು ಬಿಡಲ್ಲ. ಎಲ್ಲಾರೂ ಬೆಂಗಳೂರಲ್ಲೇ ನರಕಯಾತನೆ ಅನುಭವಿಸಬೇಕು. ಈ ಫಾಸ್ಟ್ ಸಿಟಿ ಜೀವನದಿಂದ ಸ್ವಲ್ಪ SLOW ಆಗೋಣ ಅನ್ನಿಸುತ್ತೆ. ಹಳ್ಳಿಯ ಮನಮೋಹಕ ಸೂರ್ಯೋದಯ, ಹಸಿರಿನ ಮೇಲೆ ವಜ್ರದಂತೆ ಮಿನುಗುವ ಇಬ್ಬನಿ, ಮಳೆಗಾಲದಲ್ಲಿ ಧೋ ಎಂದು ಸುರಿಯುವ ಮಳೆ, ಮೋಡದ ಹಿಂದೆ ನಗುವ ರಂಗುರಂಗಿನ ಸೂರ್ಯಾಸ್ತ, ಮನಸ್ಸಿಗೆ ಮುದ ನೀಡುವ ಸಮುದ್ರದ ಅಲೆಗಳು ಎಲ್ಲವೂ ಪ್ರಕೃತಿಯ SLOW ತಾಣಗಳು. ನಗರದ SLOW ಪ್ರಯಾಣಕ್ಕಿಂತ ಇಂತಹ SLOW ಚಿತ್ರಣವು ಸಿಗಬಾರದೇ ಅನ್ನಿಸುತ್ತದೆ. ಹಗಲುಗನಸು ಇನ್ನಷ್ಟು ಹೆಚ್ಚಲಾಗುವ ಮೊದಲು ಮತ್ತೆ ವಾಸ್ತವಕ್ಕೆ ಬಂದು ದಟ್ಟಣೆಯನ್ನು ಮಾಮೂಲಿಯಂತೆ ignore ಮಾಡಿಬಿಟ್ಟೆ. ಅದಕ್ಕಿಂತ ಹೆಚ್ಚಲಾಗಿ ಏನೂ ಮಾಡಲು ಸಾಧ್ಯ!

No comments:

Post a Comment

Printfriendly

Related Posts Plugin for WordPress, Blogger...