ನಿಂಗಪ್ಪ ಅಫೀಸ್ ಹೋಗಿದ್ದರಿಂದ ಎಂದಿನಂತೆ ಕೆಂಪಿ ತನ್ನ ಮಗನನ್ನು ಸ್ಕೂಟರ್-ನಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಳು. ಅಂಜಿಕೆಯಿಂದ ಚಾಲನೆ ಮಾಡುತ್ತಿದ್ದ ಆಕೆಗೆ ಶಾಲೆ ೨ಕಿ.ಮೀ ಇದ್ದರೂ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಜೊತೆಗೆ ಬೆಂಗಳೂರಿನ ಟ್ರಾಫಿಕ್ ನಂಬಲಸಾಧ್ಯ. ಕೆಲವೊಮ್ಮೆ ೨ಕಿ.ಮೀ ಕ್ರಮಿಸಲು ಸುಮಾರು ೪೦ ನಿಮಿಷ ತೆಗೆದುಕೊಳ್ಳುವುದುಂಟು! ಅದಕ್ಕೋಸ್ಕರ ಸ್ವಲ್ಪ ಬೇಗನೆ ಮನೆಯಿಂದ ಹೊರಟುತ್ತಿದ್ದಳು. ಇಂದು ಸಹ ಬಹುಬೇಗನೆ ಹೊರಟ್ಟಿದ್ದಳು. ಒಳ ದಾರಿಯಿಂದ ಮೇನ್-ರೋಡ್ ತಲುಪಿದ ತಕ್ಷಣ ಶುರುವಾಯಿತು ಟ್ರಾಫಿಕ್ ಕಾಟ.
ಮೇನ್-ರೋಡ್ ನಲ್ಲಿ ಗಾಡಿ ಓಡಿಸುತ್ತಿದ್ದಾಗ ಅದೇ ಶಾಲೆಯ ೧೦ನೇ ತರಗತಿಯ ಮಕ್ಕಳು ಇರಬಹುದು, ಇವಳ ಹಿಂದೆಯೇ ಸೈಕಲ್ ತುಳಿಯುತ್ತಾ ಬರುತ್ತಿದ್ದರು. ಟ್ರಾಫಿಕ್ ಮಧ್ಯ ಅವರು ನುಸುಳಿಕೊಂಡು ಸ್ಕೂಟರ್-ಗಿಂತ ಮುಂದೆ ಹೋದರು. ಸ್ವಲ್ಪ ದೂರದ ನಂತರ ಟ್ರಾಫಿಕ್ ಕಡಿಮೆಯಾಗಿ ಮತ್ತೊಂದು ಜಂಕ್ಷನ್ ಬಳಿ ಟ್ರಾಫಿಕ್ ಮತ್ತೆ ಹುಟ್ಟಿಕೊಂಡಿತು. ಅದೇ ಸಮಯದಲ್ಲಿ, ಸ್ಕೂಟರ್ ಮತ್ತು ಸೈಕಲ್ ಒಟ್ಟಾದವು. ಸೈಕಲ್ ನವರು ಹೇಗೋ ನುಸುಳಿಕೊಂಡು ಮತ್ತೆ ಮುಂದೆ ಹೋದರು. ಕೆಂಪಿಗೆ ಟ್ರಾಫಿಕ್ ಮಧ್ಯೆ ನುಸುಳಲು ಭಯ ಮತ್ತೆ ರಿಸ್ಕ್ ಯಾಕೆ ಅಂತಾ ಟ್ರಾಫಿಕ್ ಶಾಂತವಾಗಲು ಕಾದಳು. ನಂತರ ಮತ್ತೆ ಸ್ಕೂಟರ್ ಮುಂದೆ ಪ್ರಯಾಣ ಬೆಳೆಸಿತು. ಇದಾದ ಬಳಿಕ ಸೈಕಲ್-ನವರು ಸಿಗಲೇ ಇಲ್ಲ. ಬಹುಶಃ ಅವರು ಆಗಲೇ ಶಾಲೆಗೇ ತಲುಪಿದ್ದರು.
ಕೆಂಪಿಗೆ ಏನಾಯಿತೋ ಏನೋ, "ನೋಡು ಮಗು, ಹಾಗೆ ಟ್ರಾಫಿಕ್ ಅಲ್ಲಿ ಮಧ್ಯೆ ಅಡ್ಡಾ-ದಿಡ್ಡಿಯಾಗಿ ಗಾಡಿ ಬಿಡಬಾರದು. ಸ್ವಲ್ಪ ತಡವಾದರೂ ಪರವಾಗಿಲ್ಲ, ಜಾಗರೂಕತೆಯಿಂದ ಚಾಲನೆ ಮಾಡಬೇಕು" ಎಂದು ಗಾಡಿ ಓಡಿಸುತ್ತಿರುವಾಗಲೇ ಮಗನಿಗೆ ಕಿವಿಮಾತು ಹೇಳಿದಳು.
ಮಗನು ಅತಿ ಮುಗ್ಧತೆಯಿಂದ " ಹೌದಮ್ಮಾ. ನಾನು ಅರ್ಥ ಮಾಡಿಕೊಂಡೆ. ಆ ಅಣ್ಣನವರು ಸೈಕಲ್ ನಲ್ಲಿ ಸ್ಕೂಟರ್ ಓವರ್-ಟೆಕ್ ಮಾಡಿದರೂ ನೀನು ನಿಧಾನವಾಗಿ ಜಾಗರೂಕತೆಯಿಂದ ಗಾಡಿ ಓಡಿಸ್ತಾ ಇದ್ದೆ. ಸೈಕಲ್ ಮುಂದೆ ಹೋಯ್ತು ಅಂತಾ ಸ್ಕೂಟರ್ನಲ್ಲಿ ಹೋಗುತ್ತಿದ್ದ ನೀನು ಗಡಿಬಿಡಿಯಲ್ಲಿ ಓವರ್ಟೇಕ್ ಮಾಡಲು ಹೋಗಲಿಲ್ಲ. ಸೈಕಲ್ ಸ್ಕೂಟರನ್ನು ಓವರ್ಟೇಕ್ ಮಾಡಿದರೇನಂತೆ ನಾವು ಸೇಫ್ ಆಗಿ ತಲುಪಬೇಕು ಅಲ್ವೇನಮ್ಮಾ" ಎಂದು ನುಡಿಯಿತು.
ಇತ್ತ ಕೆಂಚಿಗೆ ಹೇಗೆ ಅರ್ಥ ಮಾಡಿಕೊಳ್ಳಬೇಕೋ ಗೊತ್ತಿಲ್ಲ. ಇದು ಅವಮಾನವೋ ಅಥವೋ ಮುಗ್ಧತೆಯೋ ತಿಳಿಯಲಿಲ್ಲ. ಗಾಡಿ ಓಡಿಸುವಾಗ ನಗಬೇಕೋ ಅಥವಾ ಏಕಾಗ್ರತೆಯಿಂದ ಇರಬೇಕೋ ಅನ್ನೋ ಗೊಂದಲ ಬೇರೆ. ಒಟ್ಟಿನಲ್ಲಿ ಮಗನ Punch ಮಾತಿಗೆ ಕೆಂಪಿಯ ತಲೆ Puncheರ್ ಆಗಿತ್ತು. ಏನೋ ಹೇಳಲು ಹೋಗಿ, ಮಗನಿಂದ ಏನೋ ಕೇಳಿಸಿಕೊಳ್ಳುವಂತಾಯಿತು ಎಂದು ಮಗನನ್ನು ಶಾಲೆಗೇ ಬಿಟ್ಟು ವಾಪಾಸ್ ಮನೆ ಕಡೆ ಪ್ರಯಾಣ ಮಾಡಿದಳು.
ಸಂಜೆ ಇಂದು ನಡೆದ ಘಟನೆಯನ್ನು ನಿಂಗಪ್ಪನೊಂದಿಗೆ ಹಂಚಿಕೊಂಡು ಇಬ್ಬರು ಬಾಯಿ ತುಂಬಾ ನಕ್ಕಿದ್ದೆ ನಕ್ಕಿದ್ದು!
No comments:
Post a Comment